ಕರ್ನಾಟಕ

karnataka

ETV Bharat / state

ಕೆಲಸದೊತ್ತಡದ ನಡುವೆಯೂ ಠಾಣೆ ಬಳಿ ಸುಂದರ 'ಬೃಂದಾವನ' ನಿರ್ಮಿಸಿದ ಪೊಲೀಸರು

ಹಾಸನ ಜಿಲ್ಲೆ ಚನ್ನರಾಯಪಟ್ಟಣ ನಗರ ಠಾಣೆ ಮುಂದೆ ಸುಂದರ ಉದ್ಯಾನವನ ನಿರ್ಮಿಸಿರುವ ಪೊಲೀಸ್​ ಸಿಬ್ಬಂದಿ, ಕಸ ಕಡ್ಡಿಗಳಿಂದ ತುಂಬಿದ್ದ ಜಾಗಕ್ಕೆ ಹೊಸ ಟಚ್ ಕೊಟ್ಟಿದ್ದಾರೆ.

By

Published : May 24, 2021, 9:01 AM IST

Cops developed A beautiful Garden near Police station in Channarayapattana
ಬೃಂದಾವನ ನಿರ್ಮಿಸಿದ ಪೊಲೀಸರು

ಹಾಸನ: ಕೋವಿಡ್ ಕೆಲಸದ ಒತ್ತಡದ ನಡುವೆಯೂಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಸಿಬ್ಬಂದಿ ಸುಂದರ ಹೂದೋಟ ನಿರ್ಮಿಸಿ ಗಮನ ಸೆಳೆದಿದ್ದಾರೆ.

ಪೊಲೀಸ್ ಠಾಣೆಯ ಪಕ್ಕದಲ್ಲಿದ್ದ ಜಾಗ ಕಸ- ಕಡ್ಡಿ ಗಿಡ-ಗಂಟಿಗಳಿಂದ ತುಂಬಿ ಹಾಳು ಕೊಂಪೆಯಂತಾಗಿತ್ತು. ಇದನ್ನು ನೋಡಿದ ಠಾಣೆಯ ಪಿಎಸ್ಐ ಡಿ.ಲಕ್ಷ್ಮಣ್ ಇಲ್ಲಿ ಸುಂದರ ಹೂದೋಟ ನಿರ್ಮಾಣ ಮಾಡಲು ಮುಂದಾದರು. ಈ ಬಗ್ಗೆ ಹಿರಿಯು ಅಧಿಕಾರಿಗಳ ಗಮನಕ್ಕೆ ತಂದು ಅನುಮತಿ ಪಡೆದು, ಸಿಬ್ಬಂದಿ ಸಹಕಾರದೊಂದಿಗೆ ಕೇವಲ ಎರಡು ತಿಂಗಳಲ್ಲಿ ಪಾಳು ಬಿದ್ದಿದ್ದ ಜಾಗವನ್ನು ಆಕರ್ಷಕ ತಾಣವನ್ನಾಗಿ ಪರಿವರ್ತಿಸಿದ್ದಾರೆ.

ಪೊಲೀಸ್ ಠಾಣೆ ಬಳಿ ಹೂದೋಟ ನಿರ್ಮಿಸಿದ ಪೊಲೀಸ್ ಸಿಬ್ಬಂದಿ

ಕೆಆರ್​ಎಸ್ ಮಾದರಿಯ ಬೃಂದಾವನ:ಮಂಡ್ಯದ ಕೆಆರ್​ಎಸ್​ ಬಳಿಯ ಬೃಂದಾವನ ಹೂದೋಟದಂತೆ ಈ ಹೂದೋಟವನ್ನು ನಿರ್ಮಿಸಲಾಗಿದೆ. ಅದಕ್ಕಾಗಿಯೇ ಹೂದೋಟಕ್ಕೆ ಬೃಂದಾವನ ಎಂದು ಹೆಸರಿಡಲಾಗಿದೆ. ಈ ಬೃಂದಾವನದಲ್ಲಿ ಬಗೆ ಬಗೆಯ ಹೂವಿನ ಗಿಡಗಳು, ಹುಲ್ಲು ಹಾಸು, ನಡೆಯಲು ಇಂಟರ್​ಲಾಕ್ ಹಾಕಿದ ದಾರಿ, ಅಲ್ಲಲ್ಲಿ ನೀರು ಚಿಮ್ಮುವ ವ್ಯವಸ್ಥೆ ಮತ್ತು ಕುಳಿತು ಕೊಂಡು ರಿಲ್ಯಾಕ್ಸ್ ಆಗಲು ಸಿಮೆಂಟ್ ಬೆಂಚು ಇಡಲಾಗಿದೆ. ಜೊತೆಗೆ ಸುತ್ತಲಿನ ಕಾಂಪೌಂಡ್​ನಲ್ಲಿ ಕೆಲವೊಂದು ಅರ್ಥಪೂರ್ಣ ವಾಕ್ಯಗಳನ್ನು ಬರೆಸಲಾಗಿದೆ.

ಬೃಂದಾವನದಲ್ಲಿ ಅರಳಿ ನಿಂತ ಹೂವುಗಳು

ಪ್ರತಿನಿತ್ಯ ಠಾಣೆಯಲ್ಲಿಯೇ ಇರುವ ನಾವು ರಿಲ್ಯಾಕ್ಸ್ ಆಗಲು ಹೊರಗೆ ಬಂದರೆ, ಗಲೀಜು ಜಾಗ ಕಂಡು ಇನ್ನಷ್ಟು ಬೇಸರವಾಗುತ್ತಿತ್ತು. ಹೀಗಾಗಿ, ಇಲ್ಲೊಂದು ಸುಂದರ ಹೂದೋಟ ಮಾಡಲು ಯೋಚನೆ ಮಾಡಿದಾಗ ಚನ್ನರಾಯಪಟ್ಟಣದ ಕೆಲ ಸ್ನೇಹಿತರು ಹಾಗೂ ನಾಗರಿಕರು ಸಹಾಯ ಮಾಡಿದರು. ಹೂದೋಟ ನಿರ್ಮಾಣ ಸಂದರ್ಭದಲ್ಲಿ ನಮ್ಮ ಸಿಬ್ಬಂದಿ ತಮ್ಮ ಬಿಡುವಿನ ಸಮಯದಲ್ಲಿ ಸಹಕರಿಸಿದ್ದಾರೆ. ಎಲ್ಲರ ಸಹಕಾರದಿಂದ ಇದು ಸಾಧ್ಯವಾಗಿದೆ. ಎಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ ಎಂದು ಡಿ.ಲಕ್ಷ್ಮಣ್ ಹರ್ಷ ವ್ಯಕ್ತಪಡಿಸಿದ್ದಾರೆ.

ಕಾಂಪೌಂಡ್ ಮೇಲೆ ಅರ್ಥಪೂರ್ಣ ಹೇಳಿಕೆಗಳನ್ನು ಬರೆಸಿರುವುದು

ನಾವು ಎಷ್ಟೇ ಜನಸ್ನೇಹಿ ಕೆಲಸ ಮಾಡಿದರೂ, ನಮ್ಮನ್ನು ದೂಷಣೆ ಮಾಡುವವರೇ ಹೆಚ್ಚು. ಅಂತಹ ಆಪಾದನೆಗಳ ನಡುವೆಯೂ ಪೊಲೀಸ್ ಇಲಾಖೆ ಉತ್ತಮ ಕೆಲಸ ಮಾಡುತ್ತಿದೆ. ಹಾಸನದ ಬಡಾವಣೆ ಪೊಲೀಸ್ ಠಾಣೆ, ಅರಸೀಕೆರೆ ತಾಲೂಕಿನ ಜಾವಗಲ್, ಅರಕಲಗೂಡು ತಾಲೂಕಿನ ಕೊಣನೂರು ಠಾಣೆಗಳಲ್ಲಿ ಈಗಾಗಲೇ ಸುಂದರ ಕೈತೋಟ ನಿರ್ಮಾಣವಾಗಿದೆ. ಇದೀಗ ಚನ್ನರಾಯಪಟ್ಟಣದ ಪೊಲೀಸ್ ಠಾಣೆಯ ಪಕ್ಕದಲ್ಲಿಯೇ ಬೃಂದಾವನ ನಿರ್ಮಾಣ ಮಾಡಿರುವುದು ಸಂತಸದ ವಿಷಯ. ಇಲಾಖೆಯ ಪರವಾಗಿ ನಾನು ಪಿಎಸ್ಐ ಡಿ. ಲಕ್ಷ್ಮಣ್ ಮತ್ತು ಸಿಬ್ಬಂದಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹಾಸನ ಎಸ್ಪಿ ಆರ್. ಶ್ರೀನಿವಾಸ ಗೌಡ ಹೇಳಿದ್ದಾರೆ.

ಬೃಂದಾವನ ಉದ್ಘಾಟಿಸಿದ ಹಿರಿಯ ಅಧಿಕಾರಿಗಳು

ABOUT THE AUTHOR

...view details