ಹಾಸನ: ಅತಿಯಾದ ವೇಗ ಅಪಾಯಕ್ಕೆ ಆಹ್ವಾನ ಎಂಬ ಮಾತಿದೆ. ಅದೇ ರೀತಿ ದ್ವಿಚಕ್ರ ವಾಹನಕ್ಕೆ ಕೆಎಸ್ಆರ್ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟಿರುವ ಘಟನೆ ಚನ್ನರಾಯ ಪಟ್ಟಣದಲ್ಲಿ ಸಂಭವಿಸಿದೆ.
ಕೆಎಸ್ಆರ್ಟಿಸಿ ಬಸ್-ಬೈಕ್ ನಡುವೆ ಡಿಕ್ಕಿ: ಚಾಲಕನ ಅತಿ ವೇಗಕ್ಕೆ ಇಬ್ಬರು ಬಲಿ - undefined
ದ್ವಿಚಕ್ರ ವಾಹನಕ್ಕೆ ಕೆಎಸ್ಆರ್ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟಿರುವ ಘಟನೆ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ನಡೆದಿದೆ. ಈ ಅಪಘಾತಕ್ಕೆ ಅತಿಯಾದ ವೇಗವೇ ಕಾರಣ ಎಂದು ಹೇಳಲಾಗ್ತಿದೆ.
ಮಹಾಲಿಂಗ (42), ಕುಮಾರ್ (38) ಮೃತರು. ಚನ್ನರಾಯಪಟ್ಟಣದ ಹೇಮಾವತಿ ಬಸ್ ನಿಲ್ದಾಣದ ಮುಂಭಾಗದಲ್ಲಿ ಅಪಘಾತ ನಡೆದಿದೆ. ಬೆಂಗಳೂರಿನಿಂದ ಹಾಸನದ ಕಡೆಗೆ ಹೊರಟಿದ್ದ ಚಿಕ್ಕಮಗಳೂರು ವಿಭಾಗದ ಕೆಎಸ್ಆರ್ಟಿಸಿ ಬಸ್ ಬೈಕ್ನ್ನು ಓವರ್ಟೇಕ್ ಮಾಡಲು ಹೋಗಿ ಈ ಅಪಘಾತ ಸಂಭವಿಸಿದೆ. ಮಾಹಾಲಿಂಗ ಎಂಬುವರು ಸ್ಥಳದಲ್ಲೇ ಸಾವಿಗೀಡಾಗಿದ್ದು, ಕುಮಾರ್ ಹೆಚ್ಚಿನ ಚಿಕಿತ್ಸೆಗೆ ಹಾಸನಕ್ಕೆ ಕರೆದೊಯ್ಯುವ ವೇಳೆ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.
ಬಸ್ ಚಾಲಕನ ಅಜಾಗರೂಕತೆ ಮತ್ತು ಅತಿ ವೇಗವೇ ಈ ಅಪಘಾತಕ್ಕೆ ಕಾರಣವೆಂದು ಸ್ಥಳೀಯರು ಆರೋಪಿಸಿದ್ದಾರೆ. ಕೆಎಸ್ಆರ್ಟಿಸಿ ಬಸ್ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮೃತರ ಪೋಷಕರು ಮತ್ತು ಸ್ಥಳೀಯರು ಕೆಲಕಾಲ ಪ್ರತಿಭಟನೆ ನಡೆಸಿ ಮೃತರ ಕುಟುಂಬಕ್ಕೆ ಪರಿಹಾರ ದೊರಕಿಸಿ ಕೊಡಬೇಕೆಂದು ಆಗ್ರಹಿಸಿದರು. ಈ ಕುರಿತು ಚನ್ನರಾಯಪಟ್ಟಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.