ಹಾಸನ:ಸಚಿವ ರೇವಣ್ಣ ಅವರಿಗೂ ಸಿಎಂ ಆಗುವ ಅರ್ಹತೆ ಇದೆ ಎಂಬ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿಕೆಗೆ ರೇವಣ್ಣ ಪತ್ನಿ ಭವಾನಿ ಇಂದು ಪ್ರತಿಕ್ರಿಯಿಸಿದ್ದಾರೆ.
ನಗರದ ಚೈತನ್ಯ ವೃದ್ಧಾಶ್ರಮದಲ್ಲಿ ಮಾತನಾಡಿದ ಅವರು, ಮೇ 23ರ ಫಲಿತಾಂಶದ ಬಳಿಕ ಸಿದ್ದರಾಮಯ್ಯ ಅವರನ್ನು ಹಾಸನಕ್ಕೆ ಕರೆಸೋಣ. ಈ ಬಗ್ಗೆ ನಂತರ ಮಾತನಾಡೋಣ. ಆದ್ರೆ ನಮ್ಮ ಕುಟುಂಬದ ಸದಸ್ಯರಾದ ಕುಮಾರಸ್ವಾಮಿ ಸಿ.ಎಂ ಆಗಿದ್ದಾರೆ. ಅವರ ಬದಲಿಗೆ ರೇವಣ್ಣ ಸಿಎಂ ಆಗಬೇಕೆಂಬುದನ್ನು ಬಯಸುವುದಿಲ್ಲ. ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಬೇಕೆಂಬುದು ತಮ್ಮ ಆಸೆ ಎಂದ್ರು.
ಸಿಎಂ ಆಗಿ ಕುಮಾರಸ್ವಾಮಿ ಅವರು ಒಳ್ಳೆ ಕೆಲಸ ಮಾಡುತ್ತಿದ್ದಾರೆ. ಅವರನ್ನು ಪಕ್ಕಕ್ಕೆ ತಳ್ಳಿ ರೇವಣ್ಣ ಸಿಎಂ ಆಗಲಿ ಅಂತಾ ನಾವು ಬಯಸಲ್ಲ. ಹೆಚ್ಡಿಕೆ ಅವರೇ ಸಿಎಂ ಆಗಿದ್ದರೇ ಒಳ್ಳೆಯದು ಎಂದು ಭವಾನಿ ರೇವಣ್ಣ ಹೇಳಿದ್ರು. ಅಲ್ಲದೆ ತಮ್ಮ ಮಗ ಮೂರು ಲಕ್ಷಕ್ಕೂ ಅಧಿಕ ಮತಗಳಿಂದ ಗೆಲ್ತಾನೆ ಅಂತ ಜನ ಮಾತಾಡುತ್ತಿದ್ದಾರೆ. ಆದ್ರೆ ಈ ಬಗ್ಗೆ ನಾನೇನೂ ಹೇಳಲಾರೆ. ಕೇವಲ ಇನ್ನು ಐದು ದಿನ ಬಾಕಿ ಇದೆ. ನೋಡೋಣ 23ಕ್ಕೆ ಏನಾಗುತ್ತದೆ ಎಂದು ಹೇಳಿದರು.
ಇದೇ ವೇಳೆ ಮಾಧ್ಯಮದವರಿಗೆ ಮನವಿ ಮಾಡಿದ ಭವಾನಿ ರೇವಣ್ಣ, ನಾನು ಹೇಳಿದ್ದನ್ನ ಅರೆಬರೆ ತೋರಿಸಬೇಡಿ. ಪೂರ್ತಿ ಪ್ರಸಾರ ಮಾಡಿ ಎಂದು ನಗೆ ಬೀರಿದರು.
ಭವಾನಿ ರೇವಣ್ಣ, ಸಚಿವ ರೇವಣ್ಣ ಪತ್ನಿ