ಹಾಸನ:ಗಾಂಜಾ ಮಾರುತ್ತಿದ್ದ ಮೂರು ಜನ ಆರೋಪಿಗಳನ್ನು ಬಂಧಿಸುವಲ್ಲಿ ಹಾಸನ ಜಿಲ್ಲೆಯ ಅರಸೀಕೆರೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಇಬ್ರಾಹಿಂ (20), ಸುಲ್ತಾನ್(19) ಮತ್ತು ಸೈಫ್(20) ಬಂಧಿತ ಆರೋಪಿಗಳಾಗಿದ್ದಾರೆ. ಅರಸೀಕೆರೆ ಹೊರವಲಯದ ಜೇನುಕಲ್ಲು ಬಡಾವಣೆಯ ಸ್ಟೇಡಿಯಂ ಪಕ್ಕದಲ್ಲೇ ಮೂರು ಮಂದಿ ಆರೋಪಿಗಳು ಗಾಂಜಾ ಮಾರಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಈ ಮೂವರನ್ನು ವಶಕ್ಕೆ ಪಡೆದಿದ್ದಾರೆ.
ಗಾಂಜಾ ಮಾರಾಟ ಮಾಡುತ್ತಿದ್ದವರ ಬಂಧನ ಬಂಧಿತ ಆರೋಪಿಗಳಿಂದ ಸದ್ಯ 150 ಗ್ರಾಂ ತೂಕದ 40 ಗಾಂಜಾ ಪ್ಯಾಕ್ಗಳನ್ನು ತಹಶೀಲ್ದಾರ್ ಸಂತೋಷ್ ಕುಮಾರ್ ನೇತೃತ್ವದಲ್ಲಿ ವಶಪಡಿಸಿಕೊಂಡಿದ್ದು, ಅರಸೀಕೆರೆ ನಗರ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
ರಾಜ್ಯದಲ್ಲಿ ಡ್ರಗ್ಸ್ ಜಾಲ ಪ್ರಕರಣ ತೆರೆದುಕೊಂಡ ಬಳಿಕ ಜಿಲ್ಲೆಯಲ್ಲಿ ಗಾಂಜಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈಗಾಗಲೇ ಅರಕಲಗೂಡು, ಚನ್ನರಾಯಪಟ್ಟಣ, ಶ್ರವಣಬೆಳಗೊಳ ಸೇರಿದಂತೆ ಅರಸೀಕೆರೆಯಲ್ಲಿ ಈಗ ಗಾಂಜಾ ಎಗ್ಗಿಲ್ಲದೇ ಮಾರಾಟವಾಗುತ್ತಿವೆ. ಈಗಾಗಲೇ ಅಬಕಾರಿ ಮತ್ತು ಪೊಲೀಸ್ ಇಲಾಖೆ ಸಹಯೋಗದಲ್ಲಿ ಜಿಲ್ಲೆಯಲ್ಲಿ ವಾರದೊಳಗೆ ಎಂಟಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ.