ಹಾಸನ: ಮನೆಗಳ್ಳತನ ಮತ್ತು ಸರಗಳ್ಳತನ ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಆರೋಪಿಗಳನ್ನು ಹೆಡೆಮುರಿ ಕಟ್ಟುವಲ್ಲಿ ಹಾಸನ ಗ್ರಾಮಾಂತರ ಠಾಣೆ ಹಾಗೂ ಚನ್ನರಾಯಪಟ್ಟಣ ಪೊಲೀಸರು ಯಶಸ್ವಿಯಾಗಿದ್ದಾರೆ.
ಫೆ.11 ರಂದು ಹಾಸನ ತಾಲೂಕಿನ ಯಲ್ಲಗೊಂಡನಹಳ್ಳಿ ಗ್ರಾಮದ ಒಂಟಿಮನೆ ನಿವಾಸಿ ಶಾರದಮ್ಮ ಎಂಬುವರ ಮೇಲೆ ಮೂರು ಮಂದಿ ಹಲ್ಲೆ ನಡೆಸಿ, ಚಿನ್ನಾಭರಣಗಳನ್ನು ಮತ್ತು ಮನೆಯಲ್ಲಿದ್ದ ಮೊಬೈಲ್ಗಳನ್ನು ದೋಚಿಕೊಂಡು 5 ಮಂದಿ ಆರೋಪಿಗಳು ಪರಾರಿಯಾಗಿದ್ದರು. ಈ ಕುರಿತು ತನಿಖೆ ನಡೆಸಿದ ಪೊಲೀಸರು, ಇದೀಗ ಅದೇ ಗ್ರಾಮದ ದಿಲ್ಲಿಗೌಡ (53), ಹಾಸನ ಹೊರವಲಯದ ಭುವನಹಳ್ಳಿಯ ನಿವಾಸಿ ಶಶಿಕುಮಾರ್ (24), ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಪಟ್ಟಣದ ತಿಪ್ಪೇಸ್ವಾಮಿ (32), ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕಾನಹೊಸಹಳ್ಳಿ ಗ್ರಾಮದ ಹಣ್ಣಿನ ವ್ಯಾಪಾರಿ ಬಾಷಾ (25) ಮತ್ತು ಚಿಕ್ಕಮಗಳೂರು ಜಿಲ್ಲೆಯ ಅಂಬಳೆ ಗ್ರಾಮದ ಧ್ರುವ ಪ್ರಸಾದ್ (21) ಎಂಬುವರನ್ನು ಬಂಧಿಸಿದ್ದಾರೆ.
ಬಂಧಿತರಿಂದ 33 ಗ್ರಾಂ ತೂಕದ ಮಾಂಗಲ್ಯ ಸರ ಹಾಗೂ ಕೃತ್ಯಕ್ಕೆ ಬಳಸಿದ ಒಂದು ದ್ವಿಚಕ್ರ ವಾಹನವನ್ನು ಪೊಲೀಸರು ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.