ಗದಗ: ಸರ್ಕಾರಿ ಪ್ರೌಢಶಾಲೆಯಲ್ಲಿ ಕಳೆದ 6 ವರ್ಷದಿಂದ ಇಂಗ್ಲಿಷ್ ಶಿಕ್ಷಕರಿಲ್ಲ. ಸರ್ ನಮ್ಮ ಶಾಲೆಗೆ ಇಂಗ್ಲಿಷ್ ಶಿಕ್ಷಕರನ್ನು ನಿಯೋಜನೆ ಮಾಡಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕಾಲು ಹಿಡಿದು ವಿದ್ಯಾರ್ಥಿಗಳು ಗೋಳಾಡಿದ ಘಟನೆ ಜಿಲ್ಲೆಯ ಕದಡಿ ಗ್ರಾಮದಲ್ಲಿ ನಡೆದಿದೆ.
ಗದಗ ತಾಲೂಕಿನ ಕದಡಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಕಳೆದ 6 ವರ್ಷಗಳಿಂದ ಇಂಗ್ಲಿಷ್ ಶಿಕ್ಷಕರ ಕೊರತೆ ಇದೆ. ಈ ಹಿಂದೆ ಇದ್ದ ಇಂಗ್ಲಿಷ್ ಶಿಕ್ಷಕಿ ಪಲ್ಲವಿ ಯಲಿಗಾರ್ ಎಂಬುವರನ್ನು ಅಧಿಕಾರಿಗಳು ಬೆಳಗಾವಿ ಜಿಲ್ಲೆಗೆ ನಿಯೋಜನೆಗೊಳಿಸಿದ್ದಾರೆ. ಇದರಿಂದ ಹೈಸ್ಕೂಲ್ಗೆ ಇಂಗ್ಲಿಷ್ ಟೀಚರ್ ಕೊರತೆ ಇತ್ತು. ಪರಿಣಾಮ 8ನೇ ತರಗತಿಯಿಂದ 10ನೇ ತರಗತಿ ಮಕ್ಕಳಿಗೆ ಇಂಗ್ಲಿಷ್ ಕಬ್ಬಿಣದ ಕಡಲೆಯಾಗಿತ್ತು. ಹೀಗಾಗಿ ಪೋಷಕರು, ವಿದ್ಯಾರ್ಥಿಗಳು ಸಂಬಂಧಿಸಿದ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಶಿಕ್ಷಕರನ್ನು ನೇಮಿಸುವಂತೆ ಮನವಿ ಮಾಡಿದ್ದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ.
ಹಿಗ್ಗಾಮುಗ್ಗಾ ತರಾಟೆ:
ಶುಕ್ರವಾರ ರೊಚ್ಚಿಗೆದ್ದ ಮಕ್ಕಳು ಮತ್ತು ಪೋಷಕರು ಹೈಸ್ಕೂಲ್ ಮುಂದೆ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಸ್ಥಳಕ್ಕೆ ಆಗಮಿಸಿದ ಗದಗ ಬಿಇಒ ಎಂ.ಎ.ರೆಡ್ಡೇರ್ ಗ್ರಾಮಸ್ಥರ ಮನವೊಲಿಕೆಗೆ ಮುಂದಾದರು. ಈ ವೇಳೆ ಶಿಕ್ಷಕರನ್ನು ತಕ್ಷಣ ನೇಮಕ ಮಾಡಬೇಕು ಎಂದು ಫೋಷಕರು ಪಟ್ಟು ಹಿಡಿದಿದ್ದು, ಮಕ್ಕಳು ಬಿಇಒ ಕಾಲಿಗೆ ಬಿದ್ದು ಶಿಕ್ಷಕರನ್ನು ನೇಮಿಸುವಂತೆ ಮನವಿ ಮಾಡಿದರು. ಇಷ್ಟಾದರೂ ಬಿಇಒ ಯಾವುದೇ ಭರವಸೆ ನೀಡದಿರುವುದಕ್ಕೆ ರೊಚ್ಚಿಗೆದ್ದ ಪೋಷಕರು, ಅವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.