ಕರ್ನಾಟಕ

karnataka

ಮಾಗಡಿ ಕೆರೆಯಲ್ಲಿದೆ ಬಾನಾಡಿಗಳ ಲೋಕ: ರಂಗು ತರುತ್ತಿದೆ ವಿದೇಶಿ ಹಕ್ಕಿಗಳ ಕಲರವ!

ಮಾಗಡಿ ಕೆರೆಯು ತನ್ನ ಮಡಿಲಲ್ಲಿ ಆಕಾಶದತ್ತರಕ್ಕೆ ಹಾರುವ ಬಾನಾಡಿಗಳ ಲೋಕವನ್ನು ಹಾಕಿಕೊಂಡಿದೆ. ಮುಂಜಾನೆಯಿಂದ ಕತ್ತಲೆ ಆಗುವವರೆಗೂ ವಲಸೆ ಪಕ್ಷಿಗಳ ಸಾಮ್ರಾಜ್ಯ ನೋಡುಗರ ಕಣ್ಣಿಗೆ ಹಬ್ಬದ ಸಂಭ್ರಮ ನೀಡುತ್ತದೆ.

By

Published : Dec 9, 2020, 10:59 PM IST

Published : Dec 9, 2020, 10:59 PM IST

Magadi Lake in the Shirahatti Taluk of Gadag District
ಮಾಗಡಿ ಕೆರೆಯಲ್ಲಿದೆ ಬಾನಾಡಿಗಳ ಲೋಕ

ಗದಗ:ಶಿರಹಟ್ಟಿ ತಾಲೂಕಿನ ಮಾಗಡಿ ಕೆರೆಯು ಬರೀ ನೀರನ್ನು ಮಾತ್ರ ತುಂಬಿಕೊಂಡಿಲ್ಲ. ಜೊತೆಗೆ ತನ್ನ ಮಡಿಲಲ್ಲಿ ಆಕಾಶದತ್ತರಕ್ಕೆ ಹಾರುವ ಬಾನಾಡಿಗಳ ಲೋಕವನ್ನೂ ಹಾಕಿಕೊಂಡಿದೆ. ಸಹಸ್ರಾರು ವಲಸೆ ಪಕ್ಷಿಗಳಿಗೆ ಆಸರೆಯಾಗಿದೆ.

ಸೂರ್ಯ ಉದಯಿಸಿದ ನಂತರ ಈ ಕೆರೆಯ ಸುತ್ತಮುತ್ತ ವಿದೇಶಿ ಹಕ್ಕಿಗಳ ಕಲರವ ಮೈ ಮರೆಯುವಂತೆ ಮಾಡುತ್ತದೆ. ಮುಂಜಾನೆಯಿಂದ ಕತ್ತಲೆ ಆಗುವವರೆಗೂ ಈ ವಲಸೆ ಪಕ್ಷಿಗಳ ಸಾಮ್ರಾಜ್ಯ ಕಣ್ಣಿಗೆ ಹಬ್ಬ ನೀಡುತ್ತದೆ. ಇಲ್ಲಿ ಪ್ರತಿ ವರ್ಷ ಚಳಿಗಾಲದ ಸಮಯದಲ್ಲಿ ಮಂಗೋಲಿಯಾ, ಆಸ್ಟ್ರೇಲಿಯಾ, ಜಪಾನ್, ಲಡಾಕ್​​ ಸೇರಿದಂತೆ ಅನೇಕ ಭಾಗದ ಹಕ್ಕಿಗಳು ಲಗ್ಗೆ ಇಡುತ್ತವೆ. ಚಳಿಗಾಲದ ಇಲ್ಲಿನ ಅತಿಯಾದ ಶೀತ ವಾತಾವರಣ ಪಕ್ಷಿಗಳು ಇಲ್ಲಿಗೆ ಬರಲು ಕಾರಣವಾಗಿದೆ ಎನ್ನಲಾಗಿದೆ.

ಮಾಗಡಿ ಕೆರೆಯಲ್ಲಿದೆ ಬಾನಾಡಿಗಳ ಲೋಕ

ಬಾತುಕೋಳಿಗಿಂತ ದೊಡ್ಡ ಗಾತ್ರದಲ್ಲಿರೋ ಹಂಸಗಳ ಜಾತಿಗೆ ಸೇರಿದ ಸುಮಾರು 16ಕ್ಕೂ ಹೆಚ್ಚಿನ ಜಾತಿಯ ಪಕ್ಷಿಗಳು ಈ ಕೆರೆಗೆ ಬರುತ್ತವೆ. ಇವುಗಳ ಈಜು, ಕಲರವ ಒಂದಕ್ಕಿಂತ ಒಂದು ಭಿನ್ನವಾದ ಪಕ್ಷಿಗಳ ನೋಟ ಎಲ್ಲರನ್ನು ಕೆರೆಯತ್ತ ಸೆಳೆಯುತ್ತದೆ. ಈ ವಿದೇಶಿ ಹಕ್ಕಿಗಳು ಸುಮಾರು ಮೂರು ತಿಂಗಳ ಕಾಲ ಮರಿಗಳ ಜೊತೆ ಮಾಗಡಿ ಕೆರೆಯಲ್ಲಿ ಬೀಡು ಬಿಟ್ಟಿರುತ್ತವೆ. ಈ ವಿದೇಶಿ ಅತಿಥಿಗಳು ಕೆರೆಯ ಸುತ್ತಲ ಹೊಲದಲ್ಲಿ ಶೇಂಗಾ ಹಾಗೂ ಕಡಲೆಕಾಯಿಯನ್ನು ತಿನ್ನುತ್ತವೆ. ಸೂರ್ಯಕಾಂತಿ ಮತ್ತು ಗೋವಿನ ಜೋಳವನ್ನು ಹಿಂಡು ಹಿಂಡಾಗಿ ತಿಂದು ಬರುತ್ತವೆ. ಆದರೆ ಇವುಗಳಿಂದ ಮಣ್ಣಿನ ಫಲವತ್ತತೆಯು ಹೆಚ್ಚುತ್ತದೆಯಂತೆ. ಆದ್ದರಿಂದ ಇವುಗಳನ್ನು ರೈತನ ಮಿತ್ರ ಅಂತಲೂ‌ ಕರೆಯುತ್ತಾರೆ.

ಇನ್ನು ಈ ವಿದೇಶಿ ಬಾನಾಡಿಗಳು ಹಿಂಡು ಹಿಂಡಾಗಿ ಬಂದು ಕೆರೆಯಲ್ಲಿ ಕುಳಿತುಕೊಳ್ಳುವ ದೃಶ್ಯ ನಯನ ಮನೋಹರವಾಗಿದೆ. ಈ ಬಾನಾಡಿಗಳ ಕಲರವ ನೋಡುತ್ತಿದ್ದರೆ ಕಣ್ಮುಂದೆ ಸ್ವರ್ಗ ಇದ್ದಂತೆ ಭಾಸವಾಗುತ್ತದೆ. ಮಳೆ ಕಡಿಮೆ ಬಂದಿದ್ದರಿಂದ ಕಳೆದು ಮೂರ್ನಾಲ್ಕು ವರ್ಷಗಳಿಂದ ಇಂತಹ ವೈಭವ ಕಂಡಿರಲಿಲ್ಲ. ಯಾಕೆಂದರೆ ಕೆರೆಗಳಲ್ಲಿ ನೀರು ಬತ್ತಿ ಈ ಬಾನಾಡಿಗಳ ಚಿಲಿಪಿಲಿ ಮಿಸ್ ಆಗಿತ್ತು. ಆದರೆ ಈಗ ಮತ್ತೆ ಕೆರೆ ಭರ್ತಿಯಾಗಿದ್ದರಿಂದ ಲಕ್ಷಗಟ್ಟಲೆ ಹಕ್ಕಿಗಳು ಬೀಡುಬಿಟ್ಟಿವೆ.

ಈ ಕೆರೆಯನ್ನು ಇನ್ನಷ್ಟು ಅಭಿವೃದ್ಧಿಪಡಿಸಬೇಕೆನ್ನುವುದು ಗ್ರಾಮಸ್ಥರ ಆಗ್ರಹವಾಗಿದ್ದು, ಇಲ್ಲಿ ಕುಳಿತುಕೊಳ್ಳಲು ಆಸನದ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ ಮಾಡಬೇಕೆಂಬುದೂ ಪ್ರವಾಸಿಗರ ಮನವಿಯಾಗಿದೆ. ಇದನ್ನೊಂದು ಪ್ರಸಿದ್ಧ ಪಕ್ಷಿಧಾಮವನ್ನಾಗಿ ಅಭಿವೃದ್ಧಿಗೊಳಿಸುವತ್ತ ಸರ್ಕಾರ ಗಮನ ಹರಿಸಬೇಕಿದೆ.

ABOUT THE AUTHOR

...view details