ಗದಗ : ಜಿಲ್ಲೆಯ ಬಳಗಾನೂರು ಗ್ರಾಮದಲ್ಲಿ ಪ್ರತಿಸ್ಥಾಪಿಸಲಾಗಿದ್ದ ಸಂಗೊಳ್ಳಿ ರಾಯಣ್ಣ ಮೂರ್ತಿ ತೆರುವುಗೊಳಿಸಿದ್ದು, ಈಗ ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಸಂಗೊಳ್ಳಿ ರಾಯಣ್ಣ ಸಂಘಟನೆ ಮತ್ತು ಕುರುಬ ಸಮುದಾಯದ ಮುಖಂಡರು ತೆರವು ವಿರೋಧಿಸಿ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಲಾಠಿ ಚಾರ್ಜ್ ಮಾಡಲಾಗಿದೆ. ಪರಿಣಾಮ ಗ್ರಾಮದಲ್ಲಿ ಪರಿಸ್ಥಿತಿ ಉದ್ವಿಗ್ನತೆಗೆ ತಿರುಗಿದ್ದು, ವಿವಾದದ ಕೇಂದ್ರ ಬಿಂದುವಾಗಿ ಮಾರ್ಪಟ್ಟಿದೆ.
ರಾಯಣ್ಣನ ಮೂರ್ತಿ ಪ್ರತಿಸ್ಥಾಪನೆಗೆ ಪಟ್ಟುಹಿಡಿದ ಸಂಘಟನೆ ಕಾರ್ಯಕರ್ತರ ಮೇಲೆ ಲಾಠಿ ಚಾರ್ಜ್ ಮಾಡಿದ ಪೊಲೀಸರು ಕೆಲವರನ್ನು ಬಂಧಿಸಿದ್ದಾರೆ. ಇದರಿಂದ ರೊಚ್ಚಿಗೆದ್ದ ಪ್ರತಿಭಟನಾಕಾರರು ಡಿವೈಎಸ್ಪಿ ಪ್ರಹ್ಲಾದ್ ಮತ್ತು ಎಸಿ ರಾಯಪ್ಪ ಅವರ ವಾಹನಕ್ಕೆ ಕಲ್ಲು ತೂರಿ ಜಖಂ ಗೊಳಿಸಿದ್ದಾರೆ. ಕಾರಿಗೆ ಅಡ್ಡಲಾಗಿ ಬೇಲಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರಿಂದ ಗ್ರಾಮದಲ್ಲಿ ಪರಿಸ್ಥಿತಿ ಉದ್ವಿಗ್ನತೆಗೆ ತಿರುಗಿದೆ.
ಗ್ರಾಮದ ಬಸ್ ನಿಲ್ದಾಣದ ಬಳಿ ಇರುವ ಜಾಗದಲ್ಲಿ ರಾಯಣ್ಣನ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕು ಅಂತ ಹಾಲುಮತ ಕುರುಬ ಸಮಾಜದವರು ಪಟ್ಟುಹಿಡಿದರೆ, ಇದೇ ಜಾಗದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕು ಅಂತ ಪಂಚಮಸಾಲಿ ಸಮುದಾಯವರು ಒತ್ತಾಯ ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ಕಳೆದ ನಾಲ್ಕೈದು ವರ್ಷಗಳಿಂದ ಈ ಎರಡು ಸಮುದಾಯದ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಲೇ ಇದೆ.
ರಾಯಣ್ಣ ಮೂರ್ತಿ ತೆರವು ಹಿನ್ನೆಲೆ ಬಳಗಾನೂರ ಗ್ರಾಮದಲ್ಲಿ ಉದ್ವಿಗ್ನತೆ ಈ ಹಿಂದೆ ಹಾಕಿದ್ದ ರಾಣಿ ಚೆನ್ನಮ್ಮ ನಾಮ ಫಲಕವನ್ನು ತೆರವುಗೊಳಿಸಲಾಗಿತ್ತು. ಈಗ ಮತ್ತೆ ರಾತ್ರೋರಾತ್ರಿ ನಿರ್ಮಾಣ ಮಾಡಿದ್ದರಿಂದ ರೋಸಿ ಹೋದ ಕೆಲ ಕಿಡಿಗೇಡಿಗಳು ಎಸಿ ರಾಯಪ್ಪ ಹಾಗೂ ಡಿವೈಎಸ್ಪಿ ಪ್ರಹ್ಲಾದ್ ಅವರ ಎರಡೂ ವಾಹನಕ್ಕೆ ಕಲ್ಲು ಹೊಡೆದು ಧ್ವಂಸಗೊಳಿಸಿದ್ದಾರೆ. ಘಟನೆಯಲ್ಲಿ ಭಾಗಿಯಾದ ಎರಡೂ ಸಮುದಾಯದ ಹತ್ತಾರು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಗ್ರಾಮದಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿರುವುದರಿಂದ ನೂರಾರು ಪೊಲೀಸರು ಬೀಡು ಬಿಟ್ಟಿದ್ದಾರೆ. ಸ್ಥಳಕ್ಕೆ ಹಿರಿಯ ಅಧಿಕಾರಿಗಳು ದೌಡಾಯಿಸಿ ಸದ್ಯಕ್ಕೆ ಪರಿಸ್ಥಿತಿ ತಿಳಿಗೊಳಿಸಲು ಯಶಸ್ವಿಯಾಗಿದ್ದಾರೆ.
ಸಚಿವ ಸಿ.ಸಿ ಪಾಟೀಲ್ ಒಂದು ಸಮುದಾಯಕ್ಕೆ ಮಾತ್ರವೇ ಪ್ರೋತ್ಸಾಹಿಸಿ ಅಧಿಕಾರಿಗಳನ್ನು ಬಳಸಿಕೊಂಡು ಸಂಗೊಳ್ಳಿ ರಾಯಣ್ಣ ಮೂರ್ತಿಯನ್ನು ತೆರವುಗೊಳಿಸಿದ್ದಾರೆ. ಈ ಎಲ್ಲ ಘಟನೆಗೆ ಕಾರಣ ಅವರೇ. ರಾಯಣ್ಣನ ಮೂರ್ತಿ ಪ್ರತಿಷ್ಠಾಪನೆ ಮಾಡಲೇಬೇಕು. ಒಂದು ವೇಳೆ, ಮೂರ್ತಿ ಪ್ರತಿಷ್ಠಾಪನೆ ಮಾಡದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ರಾಯಣ್ಣ ಬ್ರಿಗೇಡ್ ಯುವಕರು ಎಚ್ಚರಿಕೆ ನೀಡಿದ್ದಾರೆ. ಗ್ರಾಮದಲ್ಲಿ ಮೂರ್ತಿ ಪ್ರತಿಷ್ಠಾಪನೆ ವಿಚಾರ ರಾಜಕೀಯ ತಿರವು ಪಡೆದುಕೊಂಡಿದ್ದರಿಂದ ಮುಂದಿನ ದಿನಗಳಲ್ಲಿ ಇದು ಯಾವ ಮಟ್ಟಕ್ಕೆ ತಲುಪುಲಿದೆಯೋ ಗೊತ್ತಿಲ್ಲ ಅನ್ನುತ್ತಿದ್ದಾರೆ ಸ್ಥಳೀಯರು.