ರೈಲಿಗೆ ಶೃಂಗಾರ ಮಾಡಿ ಶಬರಿಮಲೆಗೆ ತೆರಳಿರುವ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಹುಬ್ಬಳ್ಳಿ:ಹುಬ್ಬಳ್ಳಿಯಿಂದ ಶಬರಿಮಲೆಗೆ ವಿಶೇಷ ರೈಲು ವ್ಯವಸ್ಥೆ ಕಲ್ಪಿಸಲಾಗಿದೆ. ಶನಿವಾರ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಹುಬ್ಬಳ್ಳಿ ನಿಲ್ದಾಣದಲ್ಲಿ ರೈಲಿಗೆ ವಿಶೇಷ ಪೂಜೆ ಸಲ್ಲಿಸಿದರು. ಬೋಗಿಗಳನ್ನು ಕಬ್ಬು, ಬಾಳೆ ಗಿಡ, ಹೂಗಳಿಂದ ಶೃಂಗರಿಸಲಾಗಿತ್ತು.
ಅವಹೇಳನಕಾರಿ ಪೋಸ್ಟರ್ ವೈರಲ್, ಪ್ರತಿಭಟನೆ: ಸಾಮಾಜಿಕ ಜಾಲತಾಣದಲ್ಲಿ ಅಯ್ಯಪ್ಪ ಸ್ವಾಮಿ ಕುರಿತು ಅವಹೇಳನಕಾರಿ ಪೋಸ್ಟ್ ಹಾಕಿದ ವಿಜಯಪುರ ಜಿಲ್ಲೆಯ ಸಿಂದಗಿ ನಿವಾಸಿ ಜಗದೀಶ ಕಲಬುರಗಿ ಎಂಬಾತನ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ, ಭಾರತೀಯ ಅಯ್ಯಪ್ಪ ಸೇವಾ ಸಂಘ ಸದಸ್ಯರು ಪ್ರತಿಭಟನೆ ನಡೆಸಿದರು.
ನಗರದ ರೈಲ್ವೆ ನಿಲ್ದಾಣದಲ್ಲಿ ಸೇರಿದ ಭಕ್ತರು ಮೌನವಾಗಿ ರ‍್ಯಾಲಿ ನಡೆಸಿ ಮಿನಿ ವಿಧಾನಸೌಧಕ್ಕೆ ಆಗಿಸಿ, ತಹಶೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು. "ಸಿಂದಗಿಯ ಜಗದೀಶ ಕಲಬುರಗಿ ಎಂಬ ವ್ಯಕ್ತಿ ಅಯ್ಯಪ್ಪ ಸ್ವಾಮಿಯ ಜನ್ಮದಿನದ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ್ದಾನೆ. ತಂದೆ, ತಾಯಿ ಮೇಲಿನ ನಂಬಿಕೆ, ಗುರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ನಡೆಯುತ್ತೇವೆ. ದೇವರು ಹಾಗೂ ಗುರು ಬಗ್ಗೆ ನಂಬಿಕೆ ಇಲ್ಲದವರು ಇಂತಹ ಮಾತುಗಳನ್ನಾಡುತ್ತಾರೆ. ಹೆಚ್ಚು ಪ್ರಚಾರ ಪಡೆಯುವ ಸಲುವಾಗಿ ಸನಾತನ ಧರ್ಮ ಹಾಗೂ ದೇವರ ಬಗ್ಗೆ ಮಾತನಾಡುತ್ತಿದ್ದಾರೆ. ಇದು ಸರಿಯಲ್ಲ. ಯಾವುದೇ ಧರ್ಮದ ಬಗ್ಗೆ ಹಗುರವಾಗಿ ಮಾತನಾಡಬಾರದು. ಈಗಾಗಲೇ ಜಗದೀಶನ ವಿರುದ್ಧ ಪ್ರಕರಣ ದಾಖಲಾಗಿದ್ದು, ಬಂಧಿಸಲಾಗಿದೆ. ಮುಂದೆ ಈ ರೀತಿ ಆಗದಂತೆ ಕಠಿಣ ಶಿಕ್ಷೆ ವಿಧಿಸಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡಲಾಗುವುದು" ಎಂದು ಮನವಿಯಲ್ಲಿ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ:ವಾರ್ಷಿಕ ಮಂಡಲ ಮಕರವಿಳಕ್ಕು ಯಾತ್ರೆ: ಭಕ್ತರಿಗೆ ಬಾಗಿಲು ತೆರೆದ ಶಬರಿಮಲೆ ದೇವಾಲಯ
ಕೇರಳದ ಪ್ರಸಿದ್ಧ ಪುಣ್ಯಕ್ಷೇತ್ರ ಶಬರಿಮಲೆ ಸದ್ಯ ಭಕ್ತರಿಂದ ತುಂಬಿ ತುಳುಕುತ್ತಿದೆ. ಇಡೀ ಬೆಟ್ಟ ಅಯ್ಯಪ್ಪನ ನಾಮಸ್ಮರಣೆ ಮಾಡುತ್ತಿರುವಂತೆ ಭಾಸವಾಗುತ್ತಿದೆ. ಸ್ವಾಮಿಯ ದರ್ಶನಕ್ಕೆ ವಿವಿಧೆಡೆಯಿಂದ ಭಕ್ತಕೋಟಿ ಸಾಲಾಗಿ ಸಾಗಿ ಬರುತ್ತಿದೆ. ಈ ವರ್ಷದ ಮಂಡಲ-ಮಕರವಿಳಕ್ಕು ಆಚರಣೆ ನವೆಂಬರ್ 17ರಿಂದ ಶುರುವಾಗಿದೆ. ದಕ್ಷಿಣ ರಾಜ್ಯಗಳಿಂದ ಹೆಚ್ಚು ಭಕ್ತರ ಆಗಮನವಾಗುತ್ತಿದೆ. ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಮತ್ತು ಕರ್ನಾಟಕದ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆಯುತ್ತಿದ್ದಾರೆ.