ಹುಬ್ಬಳ್ಳಿ :ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸಾಮೂಹಿಕ ನಾಯಕತ್ವದಲ್ಲಿ 150 ಕ್ಕೂ ಹೆಚ್ಚು ಸ್ಥಾನದಲ್ಲಿ ಗೆಲುವು ಸಾಧಿಸಿ ಅಧಿಕಾರಕ್ಕೆ ಬರಲಿದೆ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ವಿಶ್ವಾಸ ವ್ಯಕ್ತಪಡಿಸಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಸರ್ವೆಯಲ್ಲಿ ಮುಂದಿದ್ದು, 130 ಕ್ಷೇತ್ರಗಳಲ್ಲೂ ಮುಂದಿದೆ. ರಾಜ್ಯದ 224 ಕ್ಷೇತ್ರಗಳಿಗೆ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಪ್ರವಾಸ ಮಾಡುತ್ತಿದ್ದಾರೆ. ಬಿಜೆಪಿ ನೈತಿಕತೆ ಕಳೆದುಕೊಂಡಿದ್ದು, ಜನರು ಸರ್ಕಾರದ ಕೆಲಸದಿಂದ ಬೇಸರಗೊಂಡಿದ್ದಾರೆ. ಬಿಜೆಪಿ ಪಾಪದ ಕೊಡ ತುಂಬಿದ್ದು, ಯಾವಾಗ ಚುನಾವಣೆ ಬರುತ್ತದೆ ಎಂದು ಜನರು ಕಾಯತ್ತಿದ್ದಾರೆ. ಈ ಬಾರಿ ಜನರು ಬಿಜೆಪಿಯನ್ನು ಸೋಲಿಸುವುದು ಖಚಿತ ಎಂದರು.
ರಾಜ್ಯದಲ್ಲಿ ಬಿಜೆಪಿ ಆಡಳಿತದಿಂದ ಜನರು ರೋಸಿ ಹೋಗಿದ್ದಾರೆ. ದೇಶದಲ್ಲಿಯೇ ರಾಜ್ಯ ಭ್ರಷ್ಟಾಚಾರದ ರಾಜಧಾನಿ ಆಗಿದೆ. ಬಿಜೆಪಿ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದೆ. ಜನರ ಸಂಕಷ್ಟಕ್ಕೆ ಸ್ಪಂದಿಸದ ಸರ್ಕಾರ ಇದೀಗ ಜನ ಸಂಕಲ್ಪ ಯಾತ್ರೆಯ ನಾಟಕ ಮಾಡುತ್ತಿದೆ. ಅದರ ಬದಲು ಸರ್ಕಾರ ಕ್ಷಮೆ ಯಾತ್ರೆ ಮಾಡಬೇಕು.