ಹುಬ್ಬಳ್ಳಿ:ಕಿಮ್ಸ್ ಉತ್ತರ ಕರ್ನಾಟಕ ಭಾಗದ ಅತೀ ದೊಡ್ಡ ಆಸ್ಪತ್ರೆ . ಈ ಭಾಗದ ಸಂಜೀವಿನಿ ಎಂದೇ ಖ್ಯಾತಿ ಪಡೆದುಕೊಂಡಿದೆ. ಆದರೆ ಇಂದು ಔಷಧ ಪಡೆಯಲು ರೋಗಿಗಳು ಹರಸಾಹಸ ಪಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಇರುವ ಕೌಂಟರ್ಗಳಲ್ಲಿ ಜನರಿಗೆ ಸಮರ್ಪಕವಾಗಿ ಔಷಧ ವಿತರಣೆ ಮಾಡಲು ಆಗುತ್ತಿಲ್ಲ. ಈ ನಿಟ್ಟಿನಲ್ಲಿ ಔಷಧ ವಿತರಣೆ ಕೌಂಟರ್ ಬಳಿಯಲ್ಲಿ ಜನದಟ್ಟಣೆ ಹೆಚ್ಚಾಗಿ ರೋಗಿಗಳು ಸಾಕಷ್ಟು ಸರ್ಕಸ್ ಮಾಡಿ ಔಷಧ ಪಡೆಯುವಂತಾಗಿತ್ತು.
ರೋಗಿಗಳು ವೈದ್ಯರು ಬರೆದುಕೊಟ್ಟ ಔಷಧದ ಚೀಟಿ ಹಿಡಿದು ಎರಡು ಗಂಟೆಗಳ ಕಾಲ ಸರತಿ ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಎದುರಾಗಿತ್ತು. ಭಾರಿ ಜನಸಂದಣಿ ಇದ್ದಿದ್ದರಿಂದ ರೋಗಿಗಳು ಹಾಗೂ ಅವರ ಸಹಾಯಕ್ಕೆ ಬಂದವರು ಸರತಿ ಸಾಲಿನಲ್ಲಿ ನಿಂತುಕೊಂಡೇ ಔಷಧ ಪಡೆದಿದ್ದಾರೆ. ಈ ಬಗ್ಗೆ ಈ ಹಿಂದೆಯೂ ಕೂಡ ಮೇಲಾಧಿಕಾರಿಗಳಿಗೆ ಹಾಗೂ ಸಂಬಂಧ ಪಟ್ಟವರ ಗಮನಕ್ಕೆ ತಂದಿದ್ದೇವೆ ಅಂತಿದೆ ದಲಿತ ವಿಮೋಚನಾ ಸಮಿತಿ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ದಲಿತ ವಿಮೋಚನಾ ಸಮಿತಿ ಮುಖಂಡ ಶ್ರೀಧರ್ ಕಂದಗಲ್ಲ, ಇಲ್ಲಿನ ಅವ್ಯವಸ್ಥೆ ಬಗ್ಗೆ ಆರೋಗ್ಯ ಸಚಿವರ ಗಮನಕ್ಕೆ ತರಲಾಗಿದೆ. ಈ ಅವ್ಯವಸ್ಥೆಯನ್ನು ಬೇಗ ಸರಿ ಪಡಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಲಾಗಿದೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ. ಕೂಡಲೇ ಇದನ್ನು ಸರಿಪಡಿಸಬೇಕು ಎಂದು ಅವರು ಆರೋಗ್ಯ ಸಚಿವರನ್ನು ಒತ್ತಾಯಿಸಿದ್ದಾರೆ.