ಕರ್ನಾಟಕ

karnataka

ETV Bharat / state

ಹುಬ್ಬಳ್ಳಿ ದಲಿತರ ಕೇರಿಯಲ್ಲಿ ಪೇಜಾವರ ಶ್ರೀ ಪಾದಯಾತ್ರೆ - ರಾಮಮಂದಿರ ಉದ್ಘಾಟನೆ

ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಇಂದು ಹುಬ್ಬಳ್ಳಿಯ ಭುವನೇಶ್ವರಿ ನಗರದ ದಲಿತರ ಕಾಲೋನಿಯಲ್ಲಿ ಪಾದಯಾತ್ರೆ ಕೈಗೊಂಡರು.

ಹುಬ್ಬಳ್ಳಿ ದಲಿತರ ಕೇರಿಯಲ್ಲಿ ಪೇಜಾವರ ಶ್ರೀ ಪಾದಯಾತ್ರೆ
ಹುಬ್ಬಳ್ಳಿ ದಲಿತರ ಕೇರಿಯಲ್ಲಿ ಪೇಜಾವರ ಶ್ರೀ ಪಾದಯಾತ್ರೆ

By ETV Bharat Karnataka Team

Published : Oct 12, 2023, 3:03 PM IST

ಹುಬ್ಬಳ್ಳಿ:ಇಲ್ಲಿನ ಭುವನೇಶ್ವರಿ ನಗರದ ದಲಿತರ ಕಾಲೋನಿಯಲ್ಲಿ ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಪಾದಯಾತ್ರೆ ನಡೆಸಿದರು. ವಿಶ್ವ ಹಿಂದೂ ಪರಿಷತ್, ಹುಬ್ಬಳ್ಳಿ ಮಹಾನಗರದ ಧರ್ಮಚಾರಿ ಸಂಪರ್ಕ ಪ್ರಮುಖ ಯಲ್ಲಪ್ಪ ಬಾಗಲೋಟಿ ಅವರ ಮನೆಗೆ ಶ್ರೀಗಳು ಭೇಟಿ ನೀಡಿದರು. ವಿಶ್ವ ಹಿಂದೂ ಪರಿಷತ್ ಉತ್ತರ ಪ್ರಾಂತ ಪ್ರಚಾರಕ ಬಸವರಾಜ್ ಅವರು ಕುಟುಂಬ ಸದಸ್ಯರನ್ನು ಶ್ರೀಗಳಿಗೆ ಪರಿಚಯಿಸಿದರು. ಕಾಲೋನಿಯ ಭುವನೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ ಶ್ರೀಗಳು ಪೂಜೆ ಸಲ್ಲಿಸಿ, ಆರತಿ ಬೆಳಗಿದರು.

ದೇವಸ್ಥಾನದಲ್ಲಿ ಮಾತನಾಡಿದ ಪೇಜಾವರ ಶ್ರೀ, "ನಾವೆಲ್ಲರೂ ಸನಾತನ ಧರ್ಮೀಯರು. ನಮಗೆ ರಾಮ ಆದರ್ಶ ಪುರುಷ. ಶತಮಾನಗಳ ಹೋರಾಟದ ಫಲವಾಗಿ ರಾಮಮಂದಿರ ನಿರ್ಮಾಣವಾಗುತ್ತಿದೆ. ಜಗತ್ತೆಲ್ಲ ಸುಖವಾಗಿದೆ ಎಂದರೆ ಇದಕ್ಕೆ ಕಾರಣ ರಾಮ. ರಾವಣ ಕೆಟ್ಟ ಗುಣಗಳ ಸಂಕೇತ. ಸುಖ, ಸಂತೋಷಕ್ಕೆ ರಾಮನ ಆರಾಧನೆ ಮಾಡೋಣ" ಎಂದರು.

"ಇನ್ನೊಬ್ಬರನ್ನು ಬಡಿಯುತ್ತೇವೆ, ಕಡಿಯುತ್ತೇವೆ ಎನ್ನುವುದು ರಾವಣನ ಗುಣ. ಮಕರ ಸಂಕ್ರಮಣದ ನಂತರ ರಾಮಮಂದಿರ ಉದ್ಘಾಟನೆ ಆಗಲಿದೆ. ಪ್ರತಿಯೊಬ್ಬರೂ ಐದು ದೀಪಗಳನ್ನು ಬೆಳಗೋಣ" ಎಂದು ಮನವಿ ಮಾಡಿದರು.

ಅಯೋಧ್ಯೆ ಶ್ರೀರಾಮ ಮಂದಿರ ಉದ್ಘಾಟನೆ:ಮುಂದಿನಜನವರಿ ತಿಂಗಳಾಂತ್ಯದ ಮಕರ ಸಂಕ್ರಮಣ ಕಳೆದ ವಾರದೊಳಗೆ ಅಯೋಧ್ಯೆ ಶ್ರೀರಾಮ ಮಂದಿರ ಉದ್ಘಾಟನೆಯಾಗಲಿದೆ ಎಂದು ಮಂದಿರ ನಿರ್ಮಾಣ ಸಮಿತಿಯ ಸದಸ್ಯ ಹಾಗೂ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ (ಜೂನ್ -26-2023) ತಿಳಿಸಿದ್ದರು. ಮಂಗಳೂರಿನಲ್ಲಿ ಮಾತನಾಡಿದ್ದ ಅವರು, ಶ್ರೀರಾಮ ಮಂದಿರ ನಿರ್ಮಾಣದ ಕಾರ್ಯ ಭರದಿಂದ ಸಾಗುತ್ತಿದೆ, ಉದ್ಘಾಟನೆಯ ದಿನ ಶೀಘ್ರದಲ್ಲೇ ನಿಗದಿಯಾಗಲಿದೆ ಎಂದು ತಿಳಿಸಿದ್ದರು.

ಶ್ರೀರಾಮ ಮಂದಿರದಲ್ಲಿ ಪೂಜಾ ಸೇವೆಯ ಪಟ್ಟಿ ಇರುವುದಿಲ್ಲ: ಶ್ರೀರಾಮ ಮಂದಿರದಲ್ಲಿ ಇತರ ದೇವಸ್ಥಾನಗಳಂತೆ ಸೇವೆಯ ಪಟ್ಟಿ ಇರುವುದಿಲ್ಲ. ಸಾಮಾನ್ಯವಾಗಿ ಭಕ್ತರು ದೇವಸ್ಥಾನಗಳಿಗೆ ಹೋದಾಗ ಅಲ್ಲಿನ ಸೇವೆಗಳ ಪಟ್ಟಿಯನ್ನು ನೋಡಿ ಸೇವೆ ಸಲ್ಲಿಸುತ್ತಾರೆ. ಆದರೆ ಈ ರೀತಿಯ ವ್ಯವಸ್ಥೆ ಅಯೋಧ್ಯೆ ಶ್ರೀ ರಾಮ ಮಂದಿರದಲ್ಲಿ ಇರುವುದಿಲ್ಲ. ದೇವರಿಗೆ ಕಾಣಿಕೆ ಸಮರ್ಪಿಸುವವರು ರಾಮ ರಾಜ್ಯದ ಕನಸು ನನಸುಗೊಳಿಸುವುದಕ್ಕೆ ನೀಡುವ ಕಾಣಿಕೆಯಾಗಿದೆ. ಬದುಕಿನಲ್ಲಿ ಒಬ್ಬನಿಗೆ 10 ಲಕ್ಷ ರೂ ಖರ್ಚು ಮಾಡುವ ಸಾಮರ್ಥ್ಯ ಇದ್ದರೆ, ವಾಸಕ್ಕೆ ಮನೆ ಇಲ್ಲದವನಿಗೆ ಮನೆ ನಿರ್ಮಾಣ‌ ಮಾಡಿ ಕೊಡುವುದು, ಆರೋಗ್ಯ, ಶಿಕ್ಷಣದಂತಹ ಕೊಡುಗೆಗಳನ್ನು ಆತನ ಸಂಪತ್ತಿಗೆ ತಕ್ಕಂತೆ ನೀಡಿ ರಾಮ ರಾಜ್ಯದ ಕನಸು ನನಸು ಮಾಡಿದರೆ ಅದುವೇ ಅವರು ನೀಡುವ ಸೇವೆ ಎಂದು ಹೇಳಿದ್ದರು.

ರಾಮ ಸೇವೆಯೇ ದೇಶ ಸೇವೆ: ಶ್ರೀರಾಮ ಮಂದಿರದಲ್ಲಿ ಯಾವುದೇ ಸೇವೆ ಭಕ್ತರಿಗೆ ಇರದೇ ಇದ್ದರೂ ಭಕ್ತರೂ ತಮ್ಮ ಇಷ್ಟಾನುಸಾರ ಕಾಣಿಕೆಗಳನ್ನು ಕಾಣಿಕೆ ಡಬ್ಬಿಗೆ ಹಾಕಬಹುದು ಎಂದಿದ್ದರು. ಮಂದಿರ ವಿಚಾರದಲ್ಲಿ ರಾಜಕೀಯ ಪಕ್ಷಗಳು ವೋಟ್ ಬ್ಯಾಂಕ್ ರಾಜಕೀಯ ಮಾಡುತ್ತಿರುವ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಅದಕ್ಕೂ ನನಗೂ ಸಂಬಂಧ ಇಲ್ಲ. ರಾಮ ಸೇವೆ ಮಾಡುವುದೇ ದೇಶ ಸೇವೆ. ಯಾರೂ ಏನೂ ಬೇಕಾದರೂ ಮಾಡಲಿ ಎಂದು ತಿಳಿಸಿದ್ದರು.

ಇದನ್ನೂ ಓದಿ:ಜನವರಿ ತಿಂಗಳಾಂತ್ಯದೊಳಗೆ ಅಯೋಧ್ಯೆ ಶ್ರೀರಾಮ ಮಂದಿರ ಉದ್ಘಾಟನೆ: ಪೇಜಾವರ ಶ್ರೀ

ABOUT THE AUTHOR

...view details