ಧಾರವಾಡ: ಲಿಂಗಾಯತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭ್ರಷ್ಟರು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹೇಳಿಕೆ ನೀಡಿದ್ದಾರೆ. ಈ ವಿಚಾರ ನಮಗೆ ತುಂಬಾನೇ ಆಘಾತವಾಗಿದೆ ಎಂದು ಶಾಸಕ ಅರವಿಂದ ಬೆಲ್ಲದ ಅಸಮಾಧಾನ ವ್ಯಕ್ತಪಡಿಸಿದರು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಹುಲ್ ಮಾತ್ರ ಹೀಗೆ ಏನೇನೋ ಮಾತಾಡ್ತಾರೆ ಅಂದುಕೊಂಡಿದ್ದೆವು. ಅವರೊಂದಿಗೆ ಹೆಚ್ಚು ಓಡಾಡಿದವರು ಸಿದ್ದರಾಮಯ್ಯ. ಅವರಿಗೂ ಕೂಡ ಈ ಚಾಳಿ ಬಂದಿದೆ. ಬಹುಶಃ ರಾಹುಲ್ ಗಾಂಧಿ ಅವರ ಜೊತೆ ಸಿದ್ಧರಾಮಯ್ಯ ಅವರೂ ಪ್ರವಾಸ ಮಾಡಿದ್ದರಿಂದ ಅವರ ಐಕ್ಯೂ ಇವರಿಗೂ ಬಂದಿದೆ ಎನ್ನಿಸುತ್ತಿದೆ. ಏಕೆಂದರೆ ಈ ರೀತಿಯ ಹೇಳಿಕೆಯನ್ನು ಸಿದ್ದರಾಮಯ್ಯ ಅವರಿಂದ ನಾವು ನಿರೀಕ್ಷೆ ಮಾಡಿರಲಿಲ್ಲ ಎಂದರು.
ಲಿಂಗಾಯತರ ಮನಸ್ಸಿಗೆ ನೋವಾಗುವಂತೆ ಮಾತನಾಡಿದ್ದು ತಪ್ಪು:ಸಿದ್ದರಾಮಯ್ಯ ಅವರು ಒಬ್ಬ ಪ್ರಬುದ್ಧ ರಾಜಕಾರಣಿ. ಅವರು ಏನೇ ಹೇಳಿಕೆ ಕೊಡಬೇಕಿದ್ದರೂ ಬಹಳ ವಿಚಾರ ಮಾಡಿ ಕೊಡಬೇಕಿತ್ತು. ಈ ರೀತಿ ಮಾತನಾಡಿದ್ದು ತಪ್ಪು. ಈ ದೇಶದಲ್ಲಿ ಭ್ರಷ್ಟಾಚಾರಿಗಳು ಯಾರು ಎಂಬುದು ಎಲ್ಲರಿಗೂ ಗೊತ್ತಿದೆ. 2ಜಿ ಹಗರಣ, ಬೋಫೋರ್ಸ್ ಹಗರಣ, ಕೋಲ್ ಹಗರಣ ಕಾಂಗ್ರೆಸ್ ಅವಧಿಯಲ್ಲಿ ಆಗಿರುವಂತಹದ್ದು, ಅರ್ಕಾವತಿ ಹಗರಣ ಆಗಿರುವುದು ಸಿದ್ದರಾಮಯ್ಯ ಮುಖ್ಯಮಂತ್ರಿಗಳು ಆಗಿದ್ದಾಗ. ಈ ರೀತಿಯ ಭ್ರಷ್ಟಾಚಾರದ ಪರಂಪರೆಯನ್ನು ನಾವು ಕಾಂಗ್ರೆಸ್ ಪಕ್ಷದಲ್ಲಿ ನೋಡಿದ್ದೇವೆ ಎಂದು ತಿಳಿಸಿದರು.
ರಾಹುಲ್ ಗಾಂಧಿ ಮಾರ್ಗದಲ್ಲಿಯೇ ಸಿದ್ದರಾಮಯ್ಯ ಹೋಗುತ್ತಿದ್ದಾರೆ: ಎಲ್ಲ ಹಗರಣಗಳು ನಡೆದಿದ್ದು ಕಾಂಗ್ರೆಸ್ ಅವಧಿಯಲ್ಲಿಯೇ. ಭ್ರಷ್ಟಾಚಾರದ ಪರಂಪರೆ ಕಾಂಗ್ರೆಸ್‌ಗೆ ಇದೆ. ಇಂಥ ಇತಿಹಾಸ ಹೊಂದಿದ ಪಕ್ಷ ಇದು. ಹೀಗಾಗಿ ಈ ರೀತಿ ಸಿದ್ದರಾಮಯ್ಯ ಅವರು ಮಾತನಾಡಬಾರದಿತ್ತು. ಈ ರೀತಿಯೇ ಮಾತಾಡಿಯೇ ರಾಹುಲ್ ಗಾಂಧಿ ಅವರು ತಮ್ಮ ಸಂಸದ ಸ್ಥಾನ ಕಳೆದುಕೊಂಡಿದ್ದಾರೆ. ಅವರ ಮಾರ್ಗದಲ್ಲಿಯೇ ಸಿದ್ದರಾಮಯ್ಯ ಹೋಗುತ್ತಿದ್ದಾರೆ ಎಂದು ಬೆಲ್ಲದ್ ಹೇಳಿದರು.
ಸಿದ್ದರಾಮಯ್ಯ ಹೇಳಿಕೆಯನ್ನು ಕಾಂಗ್ರೆಸ್ನ ಲಿಂಗಾಯತ ನಾಯಕರು ಖಂಡಿಸಬೇಕು: ಎಲ್ಲ ಸಮಾಜದಲ್ಲಿ ಎಲ್ಲ ಥರದ ಜನ ಇರ್ತಾರೆ ಭ್ರಷ್ಟರದ್ದೇ ಒಂದು ಜಾತಿ ಇದೆ. ಅವರ ಬಗ್ಗೆ ಮಾತನಾಡಬೇಕಿತ್ತು. ಅದು ಬಿಟ್ಟು ಲಿಂಗಾಯತ ಸಿಎಂ ಬಗ್ಗೆ ಮಾತನಾಡಿ ಸಮಾಜದ ಮನಸ್ಸು ನೋಯಿಸಿದ್ದಾರೆ. ಈ ಹೇಳಿಕೆಯಿಂದ ಮುಂದೆ ಅವರು ಕಾಂಗ್ರೆಸ್ನಲ್ಲಿ ಲಿಂಗಾಯತರನ್ನು ಯಾವ ರೀತಿ ನಡೆಸಿಕೊಳ್ಳುತ್ತಾರೆ ಎಂಬುದು ತಿಳಿದುಬಂದಿದೆ. ಹೀಗಾಗಿ ಕಾಂಗ್ರೆಸ್ ಪಕ್ಷದಲ್ಲಿರುವ ಲಿಂಗಾಯತ ನಾಯಕ ಜಗದೀಶ್ ಶೆಟ್ಟರ್, ಎಂ ಬಿ ಪಾಟೀಲ್ ಅವರು ಈ ಲಿಂಗಾಯತ ಅಸ್ಮಿತೆಯನ್ನು ಖಂಡಿಸಿ ಸಿದ್ದರಾಮಯ್ಯ ಅವರು ನೀಡಿರುವ ಹೇಳಿಕೆಯನ್ನು ಖಂಡಿಸಬೇಕು ಎಂದು ಶಾಸಕ ಅರವಿಂದ ಬೆಲ್ಲದ ಆಗ್ರಹಿಸಿದ್ದಾರೆ.
ಸಿದ್ದರಾಮಯ್ಯ ಸ್ಪಷ್ಟನೆ..ತಾನು ಲಿಂಗಾಯತ ಮುಖ್ಯಮಂತ್ರಿಗಳೆಲ್ಲರೂ ಭ್ರಷ್ಟರು ಅಂತಾ ಹೇಳಿಲ್ಲ. ಈಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭ್ರಷ್ಟರು ಅಂತಾ ಹೇಳಿಕೆ ನೀಡಿದ್ದೆ. ಆದ್ರೆ ನನ್ನ ಹೇಳಿಕೆಯನ್ನು ಬಿಜೆಪಿಯವರು ಬೇರೆ ರೀತಿ ತಿರುಚಿದ್ದಾರೆ ಎಂದು ವರುಣಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಗಿರುವ ಮಾಜಿ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.
ಇನ್ನೂ ಓದಿ :ಬಸವಣ್ಣನವರ ಲೋಕತಂತ್ರ ವಿಶ್ವಕ್ಕೆ ಮಾದರಿ.. ರಾಹುಲ್ ಗಾಂಧಿ