ನಾನು ಹಿಂದೂ ವಿರೋಧಿಯಲ್ಲ, ಹಿಂದುತ್ವದ ವಿರೋಧಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಬ್ಬಳ್ಳಿ:ಅಯೋಧ್ಯಾದಲ್ಲಿ ರಾಮ ಮಂದಿರ ಕಟ್ಟಲು ನಮ್ಮ ವಿರೋಧವಿಲ್ಲ. ರಾಮಮಂದಿರವನ್ನು ರಾಜಕೀಯವಾಗಿ ಬಳಸಿಕೊಳ್ಳಬಾರದು. ನಾನು ಹಿಂದೂ ವಿರೋಧಿಯಲ್ಲ. ಹಿಂದುತ್ವವದ ವಿರೋಧಿಯಾಗಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು. ನಗರದ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನ್ನೊಂದು ಧರ್ಮದ ವಿರುದ್ಧ ಎತ್ತಿಕಟ್ಟಲು ಅದನ್ನು ರಾಜಕೀಯವಾಗಿ ಬಳಸಿಕೊಳ್ಳಬಾರದು ಎಂಬುದು ನಮ್ಮ ವಿರೋಧವಾಗಿದೆ. ಪ್ರತಿ ಹಳ್ಳಿಯಲ್ಲಿಯೂ ರಾಮ ಹಾಗೂ ಆಂಜನೇಯ ಮಂದಿರಗಳಿವೆ. ನಾವು ಅವುಗಳನ್ನು ಕಟ್ಟಿಲ್ಲವೇ? ಎಂದು ಪ್ರಶ್ನಿಸಿದ ಅವರು ಇದರಲ್ಲಿ ಯಾರೂ ರಾಜಕಾರಣ ಮಾಡಬಾರದು ಎಂದರು.
ಕೋಮುವಾದ ಮಾಡುವ ಯಾವುದೇ ಪಕ್ಷಗಳು ಜನರನ್ನು ಆಳಲು ಯೋಗ್ಯವಲ್ಲ. ಧರ್ಮ ಹಾಗೂ ಜಾತಿ ಹೆಸರಲ್ಲಿ ರಾಜಕೀಯ ಮಾಡಿದರೆ ಅದು ತಪ್ಪು. ಸಮಾಜದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ ಸೇರಿದಂತೆ ಎಲ್ಲ ಧರ್ಮಗಳು ಸಮಾನವಾಗಿವೆ. ಇವುಗಳ ಹೆಸರಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ. ನಾನು ಹಿಂದೂ ವಿರೋಧಿಯಲ್ಲ. ಹಿಂದುತ್ವದ ವಿರೋಧಿಯಾಗಿದ್ದೇನೆ ಎಂದರು.
ಇದನ್ನು ಓದಿ:ರಾಜ್ಯದ ವಿವಿಧ ಮಠಗಳಿಗೆ ಬಿಜೆಪಿ ಅಧ್ಯಕ್ಷ ನಡ್ಡಾ ಭೇಟಿ, ಶ್ರೀಗಳೊಂದಿಗೆ ಗೌಪ್ಯ ಸಭೆ
ಸ್ವಾತಂತ್ರ್ಯ ಹೋರಾಟಕ್ಕೆ ಇವರ ಕೊಡುಗೆ ಶೂನ್ಯ: ಸ್ವಾತಂತ್ರ್ಯ ಹೋರಾಟದಲ್ಲಿ ಯಾವುದೇ ಆರ್ಎಸ್ಎಸ್ ನಾಯಕರು ಭಾಗಿಯಾಗಿಲ್ಲ ಎಂಬ ಹೇಳಿಕೆಯ ಕುರಿತು ಪ್ರತಿಕ್ರಿಯೆ ನೀಡಿದ ಅವರು, 1925 ರಿಂದ 1947 ರವೆಗೆ ಸ್ವಾತಂತ್ರ್ಯ ಹೋರಾಟದಲ್ಲಿ ಯಾವೊಬ್ಬ ಆರ್ಎಸ್ಎಸ್ ಹಾಗೂ ಹಿಂದೂ ಮಹಾಸಭಾಗಳು ಭಾಗವಹಿಸಿಲ್ಲ. ಆ ಸಮಯದಲ್ಲಿ ಸ್ವಾತಂತ್ರ್ಯ ಹೋರಾಟ ಗಂಭೀರ ಸ್ವರೂಪದಲ್ಲಿತ್ತು. ಆಗ ಆರ್ಎಸ್ಎಸ್ ಸಂಸ್ಥಾಪಕರಾಗಲಿ, ಪದಾಧಿಕಾರಿಗಳಾಗಲಿ ಯಾರಾದರೂ ಅದರಲ್ಲಿ ಭಾಗಿಯಾಗಿದ್ದಾರೆಯೇ ಎಂದು ಪ್ರಶ್ನಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಅವಹೇಳನ ಮಾಡುವ ಉದ್ದೇಶದಿಂದ ನಾಯಿ ಮರಿ ಎಂದು ಹೇಳಿಲ್ಲ. ರಾಜ್ಯದ ಹಿತದೃಷ್ಟಿಯಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಬಳಿ ನಮಗೆ ಬರಬೇಕಾದ ಅನುದಾನವನ್ನು ಧೈರ್ಯವಾಗಿ ಕೇಳಿ ಎಂದು ಹಳ್ಳಿಯ ಭಾಷೆಯಲ್ಲಿ ಹಾಗೇ ಹೇಳಿದ್ದೇನೆ. ಹಾಗಾದರೆ ಬಿ ಎಸ್ ಯಡಿಯೂರಪ್ಪ ಅವರಿಗೆ ರಾಜಾಹುಲಿ ಅನ್ನುತ್ತಾರೆ, ನನಗೆ ಟಗರು ಮತ್ತು ಹೌದು ಹುಲಿಯಾ ಅನ್ನುತ್ತಾರೆ, ಅದನ್ನು ತಪ್ಪಾಗಿ ಅರ್ಥೈಸಿಕೊಂಡರೆ ಹೇಗೆ ಎಂದು ಅಲ್ಲಿದ್ದ ವರದಿಗಾರರನ್ನೇ ಪ್ರಶ್ನಿಸಿದರು.
ಇದೇ ವೇಳೆ, ವಿಧಾನಸೌಧದಲ್ಲಿ ಹಣ ಸಿಕ್ಕಿರುವ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ವಿಧಾನಸೌಧಕ್ಕೆ ಎಂಜಿನಿಯರ್ ಒಬ್ಬರು ಅಲ್ಲಿಗೆ ಹಣವನ್ನು ಏಕೆ ತಂದಿದ್ದರು. ಮುಖ್ಯಮಂತ್ರಿಯೋ ಅಥವಾ ಯಾವುದಾದರೂ ಮಂತ್ರಿಗೆ ಕೊಡಲೋ ಅಥವಾ ಲಂಚ ನೀಡಲು ಹೋಗಿರಬಹುದಾ ಎಂಬ ಬಗ್ಗೆ ಅನುಮಾನಗಳಿವೆ. ಈ ಬಗ್ಗೆ ತನಿಖೆಯಾಗಲಿ ಎಂದು ಅವರು ಇದೇ ವೇಳೆ ಆಗ್ರಹಿಸಿದರು.
ಬಾದಾಮಿಗೆ ತೆರಳಿದ ಮಾಜಿ ಮುಖ್ಯಮಂತ್ರಿ:ಜನವರಿ 6 ರಿಂದ ಒಂದು ತಿಂಗಳ ಕಾಲ ಐತಿಹಾಸಿಕ ಬಾದಾಮಿ ಬನಶಂಕರಿ ದೇವಿಯ ಜಾತ್ರಾ ಮಹೋತ್ಸವ ನಡೆಯಲಿದೆ. ಇಂದಿನಿಂದ ಜಾತ್ರೆ ಆರಂಭಗೊಳ್ಳಲಿದ್ದು ಹುಬ್ಬಳ್ಳಿಯಿಂದ ಅವರು ನೇರವಾಗಿ ತಮ್ಮ ಕ್ಷೇತ್ರ ಬಾದಾಮಿಗೆ ತೆರಳಿದರು.
ತುಮಕೂರು - ಮಂಗಳೂರು ಭೇಟಿ:ಗುರುವಾರ ಮಂಗಳೂರು ಮತ್ತು ತುಮಕೂರು ಜಿಲ್ಲೆಗೆ ಭೇಟಿ ನೀಡಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಆಡಳಿತ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದರು. ರಸ್ತೆ ಗುಂಡಿ ಬಗ್ಗೆ ಮಾತನಾಡಬೇಡಿ, ಲವ್ ಜಿಹಾದ್ ಬಗ್ಗೆ ಮಾತನಾಡಿ ಎಂದಿರುವ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿರುದ್ಧ ಕೆಂಡ ಕಾರಿದ್ದರು.
ಇದನ್ನೂ ಓದಿ:ಭಟ್ಕಳದ ಜಮಾತುಲ್ ಮುಸ್ಲಿಮೀನ್ ಸಂಸ್ಥೆಗೆ ಸಾವಿರ ವರ್ಷ: ಮಸೀದಿಯಲ್ಲಿ ಪ್ರಾರ್ಥನೆ ವೀಕ್ಷಿಸಿದ ಸ್ವಾಮೀಜಿ