ಹುಬ್ಬಳ್ಳಿ:ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭೆ ಕ್ಷೇತ್ರ ರಾಜ್ಯದ ಗಮನ ಸೆಳೆದ ಮತಕ್ಷೇತ್ರಗಳಲ್ಲಿ ಒಂದು. ಇಬ್ಬರು ಮುಖ್ಯಮಂತ್ರಿಗಳನ್ನು ನೀಡಿದ ವಿಶೇಷತೆ ಈ ಕ್ಷೇತ್ರಕ್ಕೆ ಇದೆ. ಈ ಕ್ಷೇತ್ರದಿಂದ ಜನತಾ ಪಾರ್ಟಿಯಿಂದ ಗೆಲುವು ಸಾಧಿಸಿದ್ದ ಎಸ್.ಆರ್. ಬೊಮ್ಮಾಯಿ 1988-89ರ ವರೆಗೆ ಹಾಗೂ ಜಗದೀಶ ಶೆಟ್ಟರ್ 2012-13ರಲ್ಲಿ ಇದೇ ಕ್ಷೇತ್ರದಿಂದ ಗೆದ್ದು ಮುಖ್ಯಮಂತ್ರಿ ಪಟ್ಟಕ್ಜೇರಿದ ಉದಾಹರಣೆ ಇದೆ. ಆದರೆ, ಇಬ್ಬರೂ ಮುಖ್ಯಮಂತ್ರಿಗಳು ಅಲ್ಪಾವಧಿ ಆಡಳಿತ ನಡೆಸಿದ್ದಾರೆ ಎಂಬುದು ಗಮನಾರ್ಹವಾಗಿದೆ.
ಇದುವರೆಗೂ ಜಗದೀಶ ಶೆಟ್ಟರ್ ಬಿಟ್ಟರೆ ಬೇರೆ ಆಕಾಂಕ್ಷಿಗಳ ಹೆಸರು ಬಿಜೆಪಿಯಿಂದ ಕೇಳಿ ಬರುತ್ತಿರಲಿಲ್ಲ. ಇದೇ ಮೊದಲ ಬಾರಿಗೆ ಬಿಜೆಪಿ ಪಕ್ಷದಲ್ಲಿ ಟಿಕೆಟ್ ಆಕಾಂಕ್ಷಿಗಳು ಹುಟ್ಟಿಕೊಂಡಿದ್ದು, ಸಾಕಷ್ಟು ಕುತೂಹಲ ಮೂಡಿಸಿದೆ. ಜಗದೀಶ ಶೆಟ್ಟರ್ ಸತತ 6 ಬಾರಿ ಗೆದ್ದಿದ್ದು, ಇದೀಗ 7ನೇ ಬಾರಿಯೂ ಕಣಕ್ಕಿಳಿದು ವಿಜಯ ಸಾಧಿಸುವ ಹುಮ್ಮಸ್ಸಿನಲ್ಲಿದ್ದಾರೆ.
ಆದರೆ, ಕಳೆದ ಹಲವು ಚುನಾವಣೆಯಲ್ಲಿ ಶೆಟ್ಟರ್ ವಿರುದ್ಧ ಸ್ಪರ್ಧಿಸಿದ್ದ ಹಲವು ಎದುರಾಳಿ ಪಕ್ಷದ ಬಹುತೇಕ ಮುಖಂಡರು ಬಿಜೆಪಿಗೆ ಸೇರಿದ್ದು ಗಮನಿಸಬೇಕಾದ ಅಂಶ. ಬಸವರಾಜ ಬೊಮ್ಮಾಯಿ (ಮುಖ್ಯಮಂತ್ರಿ), ಶಂಕರಣ್ಣ ಮುನವಳ್ಳಿ, ಡಾ. ಮಹೇಶ ನಾಲವಾಡ, ರಾಜಣ್ಣ ಕೊರವಿ ಸೇರಿದಂತೆ ಹಲವರು ಬಿಜೆಪಿ ಸೇರಿದ್ದಾರೆ. ಸಂಘಟನಾತ್ಮಕವಾಗಿ ಬಿಜೆಪಿ ಈ ಕ್ಷೇತ್ರದಲ್ಲಿ ಪ್ರಬಲವಾಗಿದೆ. ಸದಸ್ಯತ್ವ ಅಭಿಯಾನದಲ್ಲಿ ಅತಿ ಹೆಚ್ಚು ಸದಸ್ಯರನ್ನು ನೋಂದಣಿ ಮಾಡುವ ಮೂಲಕ ರಾಜ್ಯದಲ್ಲಿಯೇ ಈ ಕ್ಷೇತ್ರ ಪ್ರಥಮ ಸ್ಥಾನದಲ್ಲಿದೆ. ಈ ಅಂಶಗಳು ಶೆಟ್ಟರ್ಗೆ ಪ್ಲಸ್ ಆಗುತ್ತಲೇ ಬಂದಿವೆ.
ಏಳನೇ ಬಾರಿಯೂ ತಾವೇ ಅಭ್ಯರ್ಥಿ ಎಂದು ಜಗದೀಶ ಶೆಟ್ಟರ್ ಈಗಾಗಲೇ ಹೇಳಿಕೊಂಡಿದ್ದಾರೆ. ಆದರೆ, ಟಿಕೆಟ್ ಘೋಷಣೆ ಮಾತ್ರ ಬಾಕಿ ಇದೆ. ನಡೆಯುತ್ತಿರುವ ರಾಜಕೀಯ ವಿದ್ಯಮಾನಗಳ ಬಗ್ಗೆ ಪ್ರಶ್ನಿಸಿದಾದ, ಬೇರೆ ಕ್ಷೇತ್ರಕ್ಕೆ ಹೋಗುವ ಪ್ರಶ್ನೆ ಇಲ್ಲವೇ ಇಲ್ಲ ಎಂದು ಅವರು ಹಲವು ಬಾರಿ ಸ್ಪಷ್ಟಪಡಿಸಿದ್ದು ಉಂಟು. ಇದರ ಜೊತೆ ಪುತ್ರ ಸಂಕಲ್ಪ ಶೆಟ್ಟರ್ ಅವರಿಗೆ ಕ್ಷೇತ್ರ ಬಿಟ್ಟುಕೊಟ್ಟು ರಾಜಕೀಯ ಭವಿಷ್ಯ ಕಟ್ಟಿಕೊಡಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಒಂದು ವೇಳೆ ಶೆಟ್ಟರ್ ಅವರಿಗೆ ಟಿಕೆಟ್ ತಪ್ಪಿದರೆ ಅವರ ಪುತ್ರ ಅಷ್ಟೇ ಅಲ್ಲದೇ ಹಲವರು ಕಣಕ್ಕಿಳಿಯುವ ಇಂಗಿತ ಕೂಡ ವ್ಯಕ್ತಪಡಿಸಿದ್ದಾರೆ. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಅವರೊಂದಿಗೆ ಉದ್ಯಮಿ ವಿ.ಎಸ್.ವಿ. ಪ್ರಸಾದ್, ಡಾ.ಮಹೇಶ ನಾಲವಾಡ ಅವರ ಹೆಸರು ಕೂಡ ಬಲವಾಗಿ ಕೇಳಿ ಬರುತ್ತಿದೆ.