ಹುಬ್ಬಳ್ಳಿ: ಕೌಟುಂಬಿಕ ಕಲಹ ಹಿನ್ನೆಲೆ ಪತಿಯೇ ಪತ್ನಿಯ ತಲೆಗೆ ಕೊಡಲಿಯಂದ ಕೊಚ್ಚಿ ಬರ್ಬರ ಹತ್ಯೆ ಮಾಡಿರುವ ಘಟನೆ ನಗರದ ಆನಂದನಗರದ ಬ್ಯಾಹಟ್ಟಿ ಪ್ಲಾಟ್ನಲ್ಲಿಂದು ಬೆಳಗ್ಗೆ ನಡೆದಿದೆ. ಮೊನ್ನೆಯಷ್ಟೇ ಪತಿಯೊಬ್ಬ ಪತ್ನಿಯನ್ನು ಕತ್ತು ಹಿಸುಕಿ ಕೊಲೆ ಮಾಡಿದ ಪ್ರಕರಣ ಮಾಸುವ ಮುನ್ನವೇ ಇಂದು ಬೆಳ್ಳಂಬೆಳಿಗ್ಗೆ ಮತ್ತೊಮ್ಮೆ ನೆತ್ತರು ಹರಿದಿದ್ದು, ಭೀಕರ ಘಟನೆಗೆ ವಾಣಿಜ್ಯ ನಗರಿ ಹುಬ್ಬಳ್ಳಿ ಜನರು ಬೆಚ್ಚಿಬಿದ್ದಿದ್ದಾರೆ.
ಭೀಮಪ್ಪ ಮುತ್ತಲಗಿ ಎಂಬಾತನೇ ತನ್ನ ಪತ್ನಿ ಮಂಜುಳಾರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಆರೋಪಿ. ಕೊಡಲಿಯಿಂದ ತಲೆಗೆ ಹೊಡೆದು ಬರ್ಬರವಾಗಿ ಹತ್ಯೆ ಮಾಡಿದ ಆರೋಪಿಯು ಭೀತಿಗೊಂಡು ತಾನೇ ಪೊಲೀಸರಿಗೆ ಶರಣಾಗಿದ್ದು, ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ದುರ್ಘಟನೆಗೆ ಸಂಬಂಧಿಸಿದಂತೆ ಕೌಟುಂಬಿಕ ಕಲಹವೆಂದು ತಿಳಿದು ಬಂದಿದೆ. ಈ ಕುರಿತಂತೆ ಘಟನಾ ಸ್ಥಳಕ್ಕೆ ದಕ್ಷಿಣ ವಿಭಾಗ ಎಸಿಪಿ ಆರ್.ಕೆ.ಪಾಟೀಲ್, ಹಳೇ ಹುಬ್ಬಳ್ಳಿ ಠಾಣೆಯ ಇನ್ಸ್ಪೆಕ್ಟರ್ ಸುರೇಶ ಯಳ್ಳೂರ ಹಾಗೂ ಪಿಎಸ್ಐ ಬನ್ನಿಕೊಪ್ಪ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಪತ್ನಿಯ ಶೀಲ ಶಂಕಿಸಿ ಕೊಲೆ: ಇತ್ತೀಚೆಗೆ ಮೈಸೂರಿನಲ್ಲಿ ಪತ್ನಿಯ ಶೀಲ ಶಂಕಿಸಿ ಕೊಲೆ ಮಾಡಿದ ಪತಿ ಬಳಿಕ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದ ಘಟನೆ ನಗರದ ಆಲನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿತ್ತು. ಲೋಕೇಶ್ ಆರಾಧ್ಯ, ಪತ್ನಿ ಪಲ್ಲವಿ ಅವರನ್ನು ಹತ್ಯೆಗೈದ್ದಿದ್ದ.