ಹುಬ್ಬಳ್ಳಿ: ಮೊನ್ನೆಯಷ್ಟೇ ವಿಧಾನಸಭಾ ಚುನಾವಣೆ ಮುಗಿದು ಫಲಿತಾಂಶ ಹೊರಬಿದ್ದಿದೆ. ಈ ನಡುವೆ ಹುಬ್ಬಳ್ಳಿ -ಧಾರವಾಡ ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪಮೇಯರ್ ಆಯ್ಕೆಗೆ ಕಾಲ ಸನ್ನಿಹಿತವಾಗುತ್ತಿದೆ. ಈ ನಿಟ್ಟಿನಲ್ಲಿ ಪಾಲಿಕೆಯ ಚುನಾವಣೆ ದಿನಾಂಕ ನಿಗದಿಯಾಗಬೇಕಿದೆ.
ಹಾಲಿ ಮೇಯರ್ ಈರೇಶ ಅಂಚಟಗೇರಿ ಹಾಗೂ ಉಪ ಮೇಯರ್ ಉಮಾ ಮುಕುಂದ ಅವರ 1 ವರ್ಷದ ಅವಧಿ ಮೇ 27ಕ್ಕೆ ಪೂರ್ಣಗೊಳ್ಳಲಿದೆ. ಮುಂದಿನ 1 ವರ್ಷದ ಅವಧಿಗೆ ನೂತನ ಮೇಯರ್-ಉಪ ಮೇಯರ್ ಆಯ್ಕೆ ಚುನಾವಣೆಗೆ ದಿನಾಂಕವನ್ನು ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರು ನಿಗದಿಪಡಿಸಬೇಕು. ಚುನಾವಣೆ ನಡೆಸುವಂತೆ ಕೋರಿ ಹು-ಧಾ ಮಹಾನಗರ ಪಾಲಿಕೆ ಅಧಿಕಾರಿಗಳು, ಪ್ರಾದೇಶಿಕ ಆಯುಕ್ತರಿಗೆ ಪತ್ರ ಬರೆಯಲಿದ್ದಾರೆ.
ಚುನಾವಣೆಗೆ ದಿನಾಂಕ ನಿಗದಿಪಡಿಸಲು ವಿಳಂಬ: ಇನ್ನು ವಿಧಾನಸಭೆ ಚುನಾವಣೆ ಕರ್ತವ್ಯ ಹಾಗೂ ಮಾದರಿ ನೀತಿ ಸಂಹಿತೆಯ ಹಿನ್ನೆಲೆ ಪಾಲಿಕೆಯ ಮೇಯರ್-ಉಪ ಮೇಯರ್ ಆಯ್ಕೆ ಚುನಾವಣೆಗೆ ದಿನಾಂಕ ನಿಗದಿಪಡಿಸಲು ವಿಳಂಬವಾಗಿದೆ. ಹಾಗಾಗಿ ಮೇ 27ರೊಳಗೆ ನೂತನ ಮೇಯರ್-ಉಪ ಮೇಯರ್ ಆಯ್ಕೆ ಚುನಾವಣೆ ನಡೆಯುವುದಿಲ್ಲ. ನೂತನ ಮೇಯರ್-ಉಪ ಮೇಯರ್ ಆಯ್ಕೆಯಾಗುವವರೆಗೆ ಹಾಲಿ ಮೇಯರ್- ಉಪ ಮೇಯರ್ ಆಡಳಿತ ಮುಂದುವರಿಯಲಿದೆ.
ಪಾಲಿಕೆಯಲ್ಲಿ ಬಿಜೆಪಿ ಆಡಳಿತವಿದೆ : ನೂತನ ಮೇಯರ್-ಉಪ ಮೇಯರ್ ಆಯ್ಕೆಗೆ ಈಗಾಗಲೇ ಮೀಸಲಾತಿ ನಿಗದಿಯಾಗಿದೆ. ಮೇಯರ್ ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪ ಮೇಯರ್ ಸ್ಥಾನ ಸಾಮಾನ್ಯ ವರ್ಗಕ್ಕೆ ನಿಗದಿಪಡಿಸಿ ನಗರಾಭಿವೃದ್ಧಿ ಇಲಾಖೆ ಕೆಲ ತಿಂಗಳುಗಳ ಹಿಂದೆಯೇ ಪ್ರಕಟಿಸಿದೆ. ಹು ಧಾ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಆಡಳಿತವಿದೆ. ಮೀಸಲಾತಿಯ ಅನ್ವಯ ಬಿಜೆಪಿಯಲ್ಲಿ ಆಕಾಂಕ್ಷಿಗಳು ದೊಡ್ಡ ಸಂಖ್ಯೆಯಲ್ಲಿದ್ದು, ಪ್ರಾದೇಶಿಕ ಆಯುಕ್ತರು ಚುನಾವಣೆಗೆ ದಿನಾಂಕ ನಿಗದಿಪಡಿಸುವುದನ್ನೇ ಕಾಯುತ್ತಿದ್ದಾರೆ.