ಬೆಂಗಳೂರು/ಹುಬ್ಬಳ್ಳಿ/ಮಂಗಳೂರು:ಮಾರಕ ರೋಗದ ಎರಡನೇ ರೂಪಾಂತರ ದೇಶದ ಜನರನ್ನು ಕಂಗಾಲು ಮಾಡಿಬಿಟ್ಟಿದೆ. ಇದಕ್ಕೆ ಕಡಿವಾಣ ಹಾಕಲು ಇದೀಗ ಲಾಕ್ಡೌನ್ ವಿಸ್ತರಣೆಗೊಂಡಿದ್ದು, ನಿರ್ಮಾಣ ಕಾಮಗಾರಿಗಳಿಗೆ ಲಾಕ್ಡೌನ್ನಿಂದ ವಿನಾಯಿತಿ ಇದೆ. ಲಾಕ್ಡೌನ್ನಿಂದ ಜನಸಂಚಾರ, ವಾಹನ ಸಂಚಾರ ಕಡಿಮೆಯಾಗಿ ಕೆಲ ಮೂಲಭೂತ ಸೌಕರ್ಯ ಕಾಮಗಾರಿಗಳು ವೇಗ ಪಡೆದುಕೊಂಡಿವೆ. ಕೆಲವೆಡೆ ಸೋಂಕು ಭೀತಿ, ಕಾರ್ಮಿಕರ ಕೊರತೆಯಿಂದ ಕಾಮಗಾರಿಗಳು ಕುಂಠಿತಗೊಂಡಿವೆ. ಇನ್ನೇನು ಮಳೆಗಾಲ ಆರಂಭವಾಗಲಿದ್ದು, ಒಳಚರಂಡಿ ಕಾಮಗಾರಿಗಳು ಚುರುಕುಗೊಂಡಿವೆ.
ರಾಜ್ಯ ರಾಜಧಾನಿಯಲ್ಲಿ ಮಳೆಗಾಲಕ್ಕೆ ಆಗಬೇಕಾದ ಪೂರ್ವಸಿದ್ಧತೆಯೇನೋ ನಡೆಯುತ್ತಿದೆ. ಪ್ರತೀ ವರ್ಷ ಮುಂಜಾಗ್ರತಾ ಕ್ರಮ ಕೈಗೊಂಡರೂ ಶಾಶ್ವತ ಪರಿಹಾರ ಸಿಕ್ಕಿಲ್ಲ. 209 ಸೂಕ್ಷ್ಮ ಸ್ಥಳಗಳನ್ನು ಗುರುತಿಸಿ, ಚರಂಡಿ ನಿರ್ಮಾಣ, ಚರಂಡಿ ದುರಸ್ತಿ ಕಾರ್ಯ, ಹೂಳೆತ್ತುವುದು ಸೇರಿದಂತೆ ಕೆಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಕೋವಿಡ್ನಿಂದ ಕಾರ್ಮಿಕರಿಗೆ ಯಾವುದೇ ತೊಂದರೆಯಾಗದಂತೆ ಪಾಲಿಕೆ ಕ್ರಮ ಕೈಗೊಂಡಿದೆ.
ಲಾಕ್ಡೌನ್ನಿಂದ ಜನದಟ್ಟಣೆ ಕಡಿಮೆಯಾದ ಹಿನ್ನೆಲೆ ಹುಬ್ಬಳ್ಳಿಯಲ್ಲಿ ಕಾಮಗಾರಿಗಳು ವೇಗ ಪಡೆದುಕೊಂಡಿವೆ. ಕೋವಿಡ್ ಭೀತಿ, ಲಾಕ್ಡೌನ್ ಪರಿಣಾಮ ಶೇ. 70ರಷ್ಟು ಕಾರ್ಮಿಕರು ಕೆಲಸ ಮಾಡುತ್ತಿದ್ದು, ಚರಂಡಿ ಕಾಮಗಾರಿ ಸೇರಿದಂತೆ ಹಲವು ಕಾಮಗಾರಿಗಳಿಗೆ ಮಾತ್ರ ಯಾವುದೇ ಹಿನ್ನಡೆಯಾಗಿಲ್ಲ.