ಹುಬ್ಬಳ್ಳಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರಾಷ್ಟ್ರೀಯ ಯುವ ಜನೋತ್ಸವ ಕಾರ್ಯಕ್ರಮದ ನಿಮಿತ್ತ ಹುಬ್ಬಳ್ಳಿ - ಧಾರವಾಡ ಅವಳಿನಗರಕ್ಕೆ ಆಗಮಿಸಲಿದ್ದು, ಅವರು ಸಂಚರಿಸುವ ಮಾರ್ಗಗಳನ್ನು ಹಾಗೂ ರ‍್ಯಾಲಿ ನಡೆಸುವ ಮಾರ್ಗಗಳಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಮಾಡಿದ ಕಳಪೆ ಕಾಮಗಾರಿಯನ್ನು ಮುಚ್ಚಿಡಲು ತೇಪೆ ಹಚ್ಚುವ ಕಾರ್ಯವನ್ನು ರಾತ್ರೋರಾತ್ರಿ ಮಹಾನಗರ ಪಾಲಿಕೆಯ ಅಧಿಕಾರಿಗಳು ನಡೆಸುತ್ತಿದ್ದಾರೆ ಎಂದು ಹುಬ್ಬಳ್ಳಿ- ಧಾರವಾಡ ಮಹಾನಗರಪಾಲಿಕೆಯ ವಿರೋಧ ಪಕ್ಷದ ನಾಯಕ ದೊರಾಜ್ ಮಣಿಕುಂಟ್ಲಾ ಆರೋಪಿಸಿದರು.
ನಗರದ ಪಾಲಿಕೆಯ ವಿರೋಧ ಪಕ್ಷದ ಕಚೇರಿಯಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಅವಳಿನಗರದಲ್ಲಿ ಸಾಕಷ್ಟು ರಸ್ತೆಗಳಲ್ಲಿ ಗುಂಡಿಗಳಿದ್ದು, ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೆ ಹಾಗೂ ಪಾಲಿಕೆ ಅಧಿಕಾರಿಗಳಿಗೆ ರಸ್ತೆಯಲ್ಲಿರುವ ತೆಗ್ಗು ಗುಂಡಿಗಳನ್ನು ಮುಚ್ಚುವಂತೆ ಮನವಿ ಮಾಡಲಾಗಿತ್ತು. ಆದರೆ, ಮಹಾನಗರ ಪಾಲಿಕೆ ಅಧಿಕಾರಿಗಳು ಗುಂಡಿ ಮುಚ್ಚುವಂತಹ ಕಾರ್ಯಕ್ಕೆ ಮುಂದಾಗಿರಲಿಲ್ಲ. ಆದರೆ, ಇದೀಗ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹುಬ್ಬಳ್ಳಿ ಧಾರವಾಡದಲ್ಲಿ ಸ್ವಾಮಿ ವಿವೇಕಾನಂದರ ಜನ್ಮದಿನದ ಅಂಗವಾಗಿ ನಡೆಯುತ್ತಿರುವ ಯುವಜನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಅವರನ್ನು ಮೆಚ್ಚಿಸಲು ಹಾಗೂ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ನಡೆದಿರುವ ಭ್ರಷ್ಟಾಚಾರ ಮುಚ್ಚಿಡಲು ಪಾಲಿಕೆಯ ಅಧಿಕಾರಿಗಳು ಮತ್ತು ಮೇಯರ್ ಯತ್ನಿಸಿದ್ದಾರೆ ಎಂದು ದೂರಿದರು.
ಹುಬ್ಬಳ್ಳಿ-ಧಾರವಾಡ ಅವಳಿನಗರದ ಎಲ್ಲ ವಾರ್ಡ್ಗಳಿಗೂ ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿಗಳ ಅನುದಾನ ನೀಡಲಾಗಿದೆ. ಆದರೆ, ಕಾಂಗ್ರೆಸ್ ಸದಸ್ಯರ ವಾರ್ಡ್ಗಳಲ್ಲಿ ಬಿಡುಗಡೆ ಮಾಡಿರುವ ಅಭಿವೃದ್ಧಿ ಕಾಮಗಾರಿಗಳ ಅನುದಾನದಲ್ಲಿ ತಾರತಮ್ಯ ಮಾಡಲಾಗುತ್ತಿದ್ದು, ಸ್ಮಾರ್ಟ್ ಸಿಟಿ ಅಧಿಕಾರಿಗಳು ಬಿಜೆಪಿ ಪಕ್ಷದ ಸದಸ್ಯರ ವಾರ್ಡ್ಗಳಲ್ಲಿ ಹೆಚ್ಚು ಅನುದಾನ ಮಂಜೂರು ಮಾಡಿ ಕಾಂಗ್ರೆಸ್ ಪಕ್ಷದ ಸದಸ್ಯರ ಹಾಗೂ ಇತರೆ ಪಕ್ಷದ ಸದಸ್ಯರ ವಾರ್ಡ್ ಗಳಿಗೆ ಕಡಿಮೆ ಅನುದಾನ ನೀಡಿ ತಾರತಮ್ಯ ಮಾಡಲಾಗಿದ್ದು, ಅಲ್ಲದೇ ಎಲ್ಲಾ ವಾರ್ಡ್ ಗಳಲ್ಲಿ ಮಾಡಿದ ಕಾಮಗಾರಿಗಳು ಸಂಪೂರ್ಣವಾಗಿ ಕಳಪೆ ಮಾಡಿದ್ದಾರೆ ಎಂದು ಹೇಳಿದರು.