ಹುಬ್ಬಳ್ಳಿ:ಕಾಂಗ್ರೆಸ್ ರಾಜಕೀಯ ದಿವಾಳಿತನಕ್ಕೆ ಹೋಗಿದೆ. ಸ್ಯಾಂಟ್ರೋ ರವಿ ಬಿಜೆಪಿ ಕಾರ್ಯಕರ್ತ ಹೌದೋ ಅಲ್ಲವೋ ಎನ್ನುವುದನ್ನು ಪರಿಶೀಲನೆ ಮಾಡುವುದಕ್ಕೆ ಹೇಳಿರುವೆ. ಕಾಂಗ್ರೆಸ್ನಲ್ಲಿ ಎಂತವರು ಇದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಇಂತಹ ಸಂಸ್ಕೃತಿ ಆರಂಭವಾಗಿದ್ದೇ ಕಾಂಗ್ರೆಸ್ನಿಂದ. ಕಾಂಗ್ರೆಸ್ನವರು ಹತಾಶರಾಗಿದ್ದಾರೆ ಎಂದು ಕಾಂಗ್ರೆಸ್ ನಾಯಕರ ಟ್ವೀಟ್ಗೆ ಸಿಎಂ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.
ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಸ್ಯಾಂಟ್ರೋ ರವಿ ಬಂಧನದ ಬಗ್ಗೆ ಗೊತ್ತಿಲ್ಲ. ನಾನು ಫ್ಲೈಟ್ನಲ್ಲಿದ್ದೆ. ಗೊತ್ತಿಲ್ಲದ ವಿಷಯದ ಬಗ್ಗೆ ನಾನು ಮಾತನಾಡುವುದಿಲ್ಲ ಎಂದರು. ಬಿಜೆಪಿಯಲ್ಲಿ ಮಾತ್ರ ಇಂತಹ ತಲೆಹಿಡುಕರು ಇರೋಕೆ ಸಾಧ್ಯ ಅಂತಾ ದಿನೇಶ ಗುಂಡುರಾವ್ ಕಾಂಗ್ರೆಸ್ ಟ್ವೀಟ್ ವಿಚಾರವಾಗಿ ಮಾತನಾಡಿದ ಅವರು, ಕಾಂಗ್ರೆಸ್ನಲ್ಲಿ ಎಂತವರಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಮೊದಲು ಅವರು ತಮ್ಮ ಮನೆ ಸ್ವಚ್ಛ ಮಾಡಿಕೊಳ್ಳಬೇಕು. ಕಾಂಗ್ರೆಸ್ನವರು ಹತಾಶರಾಗಿದ್ದಾರೆ. ಅದಕ್ಕೆ ಉಚಿತ ಯೋಜನೆಗಳ ಬಗ್ಗೆ ಹೇಳುತ್ತಿದ್ದಾರೆ. ಕಾಂಗ್ರೆಸ್ ಸುಳ್ಳು ಆಶ್ವಾಸನೆ ನೀಡಿ ಅಧಿಕಾರಕ್ಕೆ ಬರುವ ಕನಸು ಕಂಡಿದೆ ಎಂದು ವಾಗ್ದಾಳಿ ನಡೆಸಿದರು.
ಯುವಜನೋತ್ಸವ ಸಮಾರಂಭಕ್ಕೆ ಮೋದಿ ಆಗಮಿಸುತ್ತಿರುವುದು ಸಂತೋಷದ ಸಂಗತಿ. ಇದೇ ಮೊದಲ ಬಾರಿಗೆ ಈ ಭಾಗದಲ್ಲಿ ರಾಷ್ಟ್ರಮಟ್ಟದ ಯುವಜನೋತ್ಸವ ಹಮ್ಮಿಕೊಳ್ಳಲಾಗಿದೆ. ಜನಸಂಖ್ಯೆ ದೇಶಕ್ಕೆ ಮಾರಕ ಅಂತ ನಾವೆಲ್ಲ ಮಾತನಾಡುತ್ತಿದ್ದೆವು. ಆದ್ರೆ ಅದೇ ಜನರಿಗೆ ಮತ್ತು ಯುವಕರಿಗೆ ಕೌಶಲ್ಯ ತರಬೇತಿ ನೀಡಿದರೇ ದೇಶ ಕಟ್ಟಬಹುದು ಎಂದು ಪ್ರಧಾನಿ ಮೋದಿ ಸಾಧಿಸಿ ತೋರಿಸಿದ್ದಾರೆ. ನೂತನ ಶಿಕ್ಷಣ ನೀತಿಯಿಂದ ಮೂರೇ ವರ್ಷದಲ್ಲಿ 2 ಡಿಗ್ರಿ ತೆಗೆದುಕೊಳ್ಳಬಹುದು. ಹಲವು ವಿಶೇಷ ಕಾರ್ಯಕ್ರಮಗಳನ್ನು ಪ್ರಧಾನಿ ಕೊಟ್ಟಿದ್ದಾರೆ. ಯುವಕರಿಗೆ ಮುದ್ರಾ ಯೋಜನೆ, ಖೇಲೋ ಇಂಡಿಯಾ, ಫಿಟ್ ಇಂಡಿಯಾ, ಜೀತೋ ಇಂಡಿಯಾ ಮೂಲಕ ಯುವಕರ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಿದ್ದಾರೆ. ಮೋದಿಯವರು ಬರುತ್ತಿರುವುದರಿಂದ ನಮ್ಮೆಲ್ಲರಿಗೂ ಸಂತೋಷವಾಗಿದೆ ಮತ್ತು ಯುವಕರಲ್ಲಿ ಉತ್ಸಾಹ ಹೆಚ್ಚಲಿದೆ. ಯುವಜನೋತ್ಸವ ಯಶಸ್ವಿಗೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ ಎಂದು ಸಿಎಂ ಹೇಳಿದರು.