ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಪ್ರತಿಕ್ರಿಯೆ ಹುಬ್ಬಳ್ಳಿ:ಪಠ್ಯ ಪುಸ್ತಕಗಳಲ್ಲಿ ಇಂಡಿಯಾ ಬದಲಾಗಿ ಭಾರತ ಹೆಸರು ಬದಲಾವಣೆಗೆ ಕೇಂದ್ರ ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಏನು ನಿರ್ದೇಶನ ಕೊಡುತ್ತೋ ಅದನ್ನು ರಾಜ್ಯ ಸರ್ಕಾರ ಪಾಲಿಸಬೇಕು ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಹೇಳಿದ್ದಾರೆ.
ನಗರದಲ್ಲಿಂದು ಮಾತನಾಡಿದ ಅವರು, ಇಂಡಿಯಾ ಅಂದರೆ ಹಿಂದೆ ಬ್ರಿಟಿಷರಿಟ್ಟ ಹೆಸರು. ಈಗ ಭಾರತ ಅಂದರೆ ತಪ್ಪೇನಿಲ್ಲ. ಇಂಡಿಯಾ ಅನ್ನುವರು ಭಾರತ ಅಂತಾರೆ. ಭಾರತಕ್ಕೆ ಹೊರದೇಶದಲ್ಲಿ ಇಂಡಿಯಾ ಅಂತಾರೆ. ಪಠ್ಯ ಪುಸ್ತಕಗಳಲ್ಲಿ ಭಾರತ ಎಂದು ನಮೂದು ಮಾಡಿದರೆ ತಪ್ಪೇನಿಲ್ಲ ಎಂದರು.
ಪಠ್ಯ ಪುಸ್ತಕದಲ್ಲಿ ಏನು ಸೇರಿಸಬೇಕೆಂದು ತಜ್ಞರು ಶಿಫಾರಸು ಮಾಡುತ್ತಾರೆ. ತಜ್ಞರ ವರದಿ ಬಂದ ಬಳಿಕವೇ ಸರ್ಕಾರ ಕ್ರಮ ಕೈಗೊಳ್ಳಬೇಕು. ಏಕಾಏಕಿ ನಿರ್ಧಾರವೂ ಸರಿಯಲ್ಲ. ಎನ್ಸಿಆರ್ಟಿ ಸಮಿತಿ ನಿರ್ದೇಶನ ಕೊಡಬೇಕು. ಡಿಎಸ್ಆರ್ಟಿಸಿ ಸಮಿತಿ ಪಾಲನೆ ಮಾಡಬೇಕು ಎಂದು ತಿಳಿಸಿದರು.
ಈ ಹಿಂದೆ ಪಠ್ಯ ಪುಸ್ತಕಗಳಲ್ಲಿ ಕನ್ನಡ ಭಾಷೆ ಅನುಷ್ಠಾನ ಕುರಿತು ಶಿಕ್ಷಣ ತಜ್ಞ ಎಚ್.ನರಸಿಂಹ ನೇತೃತ್ವದಲ್ಲಿ ಸಮಿತಿ ಮಾಡಲಾಗಿತ್ತು. ಅವರು ಕೊಟ್ಟ ಸಲಹೆ ಸೂಚನೆಗಳನ್ನು ಪಾಲಿಸಲಾಯಿತು. ಅವರ ಸೂಚನೆಗಳ ಸಾಧಕ-ಭಾಧಕಗಳ ಕುರಿತು ಚರ್ಚೆಯೂ ಆಯಿತು. ನರಸಿಂಹ ಅವರು ಕೊಟ್ಟ ವರದಿಯನ್ನು ಸರ್ಕಾರ ಸಕಾರಾತ್ಮಕವಾಗಿ ತೆಗೆದುಕೊಂಡಿತು ಎಂದರು.
ಇಂಡಿಯಾ, ಭಾರತ ಹೆಸರು ಬದಲಾವಣೆಯಲ್ಲಿ ರಾಜಕೀಯ ವಿಚಾರಕ್ಕೆ ಪ್ರತಿಕ್ರಿಯೆ ನೀಡಲು ಹೊರಟ್ಟಿ ನಿರಾಕರಿಸಿದರು. ಈ ಕುರಿತು ನಾನು ಮಾತನಾಡಲ್ಲ. ಇಂಥ ವಿಷಯಗಳಲ್ಲಿ ರಾಜಕಾರಣವನ್ನು ಎಂದೂ ತರಬಾರದು ಎಂದು ಹೇಳಿದರು.
NCERT ಸಮಿತಿ ಶಿಫಾರಸು:INDIA ಮತ್ತು ಭಾರತ ಹೆಸರು ಮತ್ತೆ ಮುನ್ನೆಲೆಗೆ ಬಂದಿದೆ. ಜಿ 20 ಶೃಂಗಸಭೆ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ಆಸನದ ಮುಂದೆ ಮತ್ತು ಗಣ್ಯರಿಗೆ ರಾಷ್ಟ್ರಪತಿಗಳ ಆಹ್ವಾನ ಪತ್ರಿಕೆಯಲ್ಲಿ 'ಭಾರತ' ಎಂದಿರುವುದು ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಶಾಲಾ ಪಠ್ಯಕ್ರಮಗಳಲ್ಲಿ ಇಂಡಿಯಾ ಬದಲಿಗೆ ಭಾರತ ಎಂದು ಬದಲಿಸಲು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯ (ಎನ್‌ಸಿಇಆರ್‌ಟಿ) ಉನ್ನತ ಸಮಿಯು ಶಿಫಾರಸು (ಅಕ್ಟೋಬರ್ 25-2023) ಮಾಡಿತ್ತು.
ಸಮಿತಿಯ ಅಧ್ಯಕ್ಷ ಸಿಐ ಐಸಾಕ್ ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, INDIA ಎಂಬ ಹೆಸರನ್ನು ಶಾಲಾ ಪಠ್ಯಕ್ರಮದಿಂದ ತೆಗೆದು 'ಭಾರತ' ಎಂದು ಬರೆಯಲು ಸೂಚಿಸಲಾಗಿದೆ. ಜೊತೆಗೆ 'ಪ್ರಾಚೀನ ಇತಿಹಾಸ'ವನ್ನು ತೆಗೆದುಹಾಕಿ ಅದರ ಬದಲಿಗೆ 'ಶಾಸ್ತ್ರೀಯ ಇತಿಹಾಸ'ವನ್ನು ಮಕ್ಕಳಿಗೆ ಕಲಿಸುವ ಬಗ್ಗೆಯೂ ಶಿಫಾರಸು ಮಾಡಲಾಗಿದೆ ಎಂದು ಹೇಳಿದ್ದರು.
ಇದನ್ನೂ ಓದಿ:ಶಾಲಾ ಪುಸ್ತಕಗಳಲ್ಲಿ 'ಇಂಡಿಯಾ' ಬದಲಿಗೆ 'ಭಾರತ' ಪದ ಬಳಸಿ: NCERT ಸಮಿತಿ ಶಿಫಾರಸು