ಹುಬ್ಬಳ್ಳಿ:ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ದೇಶದ ಆಡಳಿತಕ್ಕಿಂತ ಚುನಾವಣೆಯೇ ಮುಖ್ಯವಾಗಿದೆ. ದೇಶದಲ್ಲಿ ಎಲ್ಲಿಯೇ ಚುನಾವಣೆ ನಡೆದರೂ ಪ್ರಚಾರಕ್ಕೆ ತೆರಳುತ್ತಾರೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಟೀಕಿಸಿದರು.
ನಗರದಲ್ಲಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, "ಧರ್ಮ, ಜಾತಿಯನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡುತ್ತಿರುವ ಬಿಜೆಪಿ ಪಕ್ಷದವರಿಗೆ ಮುಂದೊಂದು ದಿನ ನಿರುದ್ಯೋಗ, ಹಸಿವು ಮತ್ತು ರೈತರ ಸಂಕಷ್ಟ ಅರಿವಾಗಲಿದೆ. ದೇಶದಲ್ಲಿ ಬಿಜೆಪಿ ಒಂದೇ ಪಕ್ಷ ಇರಬೇಕು ಏನ್ನುವ ಉದ್ದೇಶ ಅವರದ್ದಾಗಿದೆ. ಇಂತಹ ಸರ್ವಾಧಿಕಾರಿ ನಡೆ ಅನುಸರಿಸುತ್ತಿದ್ದ ಹಿಟ್ಲರ್ ಸಿದ್ಧಾಂತಗಳೇ ಮಣ್ಣಾಗಿವೆ. ಸದ್ಯ ಕರ್ನಾಟಕದ ರಾಜ್ಯದ ಜನತೆ ಕಾಂಗ್ರೆಸ್ ಆಡಳಿತ ಬಯಸುತ್ತಿದ್ದು, ಈ ಚುನಾವಣೆಯಲ್ಲಿ ಕಾಂಗ್ರೆಸ್ ಜಯಗಳಿಸಿ ದೇಶಕ್ಕೆ ಹೊಸ ಸಂದೇಶ ನೀಡಲಿದೆ" ಎಂದು ಹೇಳಿದರು.
ಪ್ರಧಾನಿ ಮೋದಿ ಅವರು ಭ್ರಷ್ಟಾಚಾರದ ವಿರುದ್ಧ ಮಾತನಾಡುತ್ತಾರೆ. ಆದರೆ, ಅವರ ಅಕ್ಕ-ಪಕ್ಕ ಭ್ರಷ್ಟಾಚಾರ ನಡೆಸುವವರು ಇದ್ದಾರೆ. ಇದರ ಬಗ್ಗೆ ಅವರ ಪ್ರತಿಕ್ರಿಯೆ ಏನು?. ಎಂದು ಪ್ರಶ್ನಿಸಿ, ಜಾರಿ ನಿರ್ದೇಶನಾಲಯ (ಇಡಿ), ಆದಾಯ ತೆರಿಗೆ ಇಲಾಖೆ (ಐಟಿ ಇಲಾಖೆ) ಮತ್ತು ಸಿಬಿಐ ಸಂಸ್ಥೆಯನ್ನು ದುರ್ಬಳಕೆ ಮಾಡಿಕೊಂಡು ವಿರೋಧ ಪಕ್ಷದ ನಾಯಕರನ್ನು ಹೆದರಿಸುತ್ತಿದ್ದಾರೆ. ಮುಂದೊಂದು ದಿನ ತಕ್ಕಪಾಠ ಕಲಿಯಲಿದ್ದಾರೆ ಎಂದು ಎಚ್ಚರಿಸಿದರು.
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ತಿಳಿಸಿದ ಬಜರಂಗ ದಳ ನಿಷೇಧ ಕುರಿತು ಪ್ರತಿಕ್ರಿಯಿಸಿದ ಗೆಹ್ಲೋಟ್, ಸಮಾಜದಲ್ಲಿ ಶಾಂತಿ ಕದಡುವ ವ್ಯಕ್ತಿ ಮತ್ತು ಸಂಘಟನೆ ವಿರುದ್ಧ ಕ್ರಮ ಕೈಗೊಳ್ಳಲು ಸುಪ್ರೀಂ ಕೋರ್ಟ್ ಆದೇಶವೇ ಇದೆ. ಆದೇಶ ಪಾಲಿಸದಿದ್ದರೆ ನ್ಯಾಯಾಂಗ ನಿಂದನೆಯಾಗುತ್ತದೆ ಎನ್ನುವ ಮೂಲಕ ಬಜರಂಗದಳ ನಿಷೇಧಿಸುವ ಭರವಸೆಯನ್ನು ಸಮರ್ಥಿಸಿಕೊಂಡರು.