ಹುಬ್ಬಳ್ಳಿ:ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಬಗ್ಗೆ ಜನಜಾಗೃತಿ ಸಮಾವೇಶಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ನಗರದ ನೆಹರು ಮೈದಾನಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಜನಪ್ರತಿನಿಧಿಗಳ ದಂಡು ವಾಣಿಜ್ಯ ನಗರಿ ಹುಬ್ಬಳ್ಳಿಯತ್ತ ಬರುತ್ತಿದೆ.
ಹುಬ್ಬಳ್ಳಿಗೆ ಇಂದು ಅಮಿತ್ ಶಾ ಆಗಮನ ಹಿನ್ನೆಲೆ ನಗರದೆಲ್ಲೆಡೆ ಪೊಲೀಸ್ ಸರ್ಪಗಾವಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ, ಸುರೇಶ್ ಅಂಗಡಿ, ಸಚಿವರಾದ ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ ಸೇರಿದಂತೆ ಧಾರವಾಡ ಹಾಗೂ ಅಕ್ಕಪಕ್ಕದ ಜಿಲ್ಲೆಗಳ ಬಿಜೆಪಿ ನಾಯಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಹೆಚ್ಚಿನ ಭದ್ರತೆಗಾಗಿ ಸಮಾವೇಶ ನಡೆಯುವ ಮೈದಾನ ಹಾಗೂ ಸುತ್ತಮುತ್ತಲಿನ ಸ್ಥಳಗಳಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ಭದ್ರತೆಗಾಗಿ 4 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.
ಮೈದಾನದ ಸುತ್ತಲಿನ ಕಟ್ಟಡಗಳ ಮೇಲೂ ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿದ್ದು, ನಿನ್ನೆ ರಾತ್ರಿಯವರೆಗೂ ರಾಜ್ಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಅಮರಕುಮಾರ್ ಪಾಂಡೆ ಮತ್ತು ಹುಬ್ಬಳ್ಳಿ–ಧಾರವಾಡ ಪೊಲೀಸ್ ಕಮಿಷನರ್ ಆರ್.ದಿಲೀಪ್ ಭದ್ರತಾ ವ್ಯವಸ್ಥೆ ಪರಿಶೀಲಿಸಿದರು. ಅಲ್ಲದೇ ಬಸ್, ರೈಲ್ವೆ ನಿಲ್ದಾಣ ಮತ್ತು ವಿಮಾನ ನಿಲ್ದಾಣಗಳಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ. ನೆಹರೂ ಮೈದಾನದ ಸುತ್ತಲೂ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ.
ಬಿಜೆಪಿಯ ಬೃಹತ್ ಸಮಾವೇಶಕ್ಕಾಗಿ ನಗರ ಕೆಸರಿಮಯವಾಗಿದೆ. ಎಲ್ಲಾ ಕಡೆ ಬ್ಯಾನರ್, ಬಂಟಿಂಗ್ಗಳು ರಾರಾಜಿಸುತ್ತಿವೆ. ಈ ಸಮಾವೇಶ ಹಲವಾರು ನಿರೀಕ್ಷೆಗಳನ್ನು ಇಟ್ಟುಕೊಂಡಿದೆ. ಅಲ್ಲದೇ ಸಚಿವ ಸಂಪುಟ ಕುರಿತ ಚರ್ಚೆ ಕೂಡ ಇಂದು ನಡೆಯುವ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗಿದೆ.