ಕರ್ನಾಟಕ

karnataka

ನ.26ರಂದು ಮೈಸೂರಿನಲ್ಲಿ ಬುಡಕಟ್ಟು ಜನಾಂಗದಿಂದ ಬೃಹತ್​ ರ‍್ಯಾಲಿ: ಶಾಂತಾರಾಂ ಸಿದ್ದಿ

By ETV Bharat Karnataka Team

Published : Nov 22, 2023, 9:01 PM IST

ನ.26ರಂದು ಮೈಸೂರಿನಲ್ಲಿ ನಡೆಯುವ ಬೃಹತ್​ ರ‍್ಯಾಲಿಗೆ ರಾಜ್ಯದ ವಿವಿಧ ಬುಡಕಟ್ಟು ಜನಾಂಗಗಳ 25 ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ಬರಲಿದ್ದಾರೆ ಎಂದು ಎಂಎಲ್​ಸಿ ಶಾಂತಾರಾಂ ಸಿದ್ದಿ ತಿಳಿಸಿದ್ದಾರೆ.

Etv Bharata-massive-rally-by-tribals-in-mysuru-on-26-says-mlc-shantaram-siddhi
ನ.26ರಂದು ಮೈಸೂರಿನಲ್ಲಿ ಬುಡಕಟ್ಟು ಜನಾಂಗದಿಂದ ಬೃಹತ್​ ರ‍್ಯಾಲಿ: ಶಾಂತಾರಾಂ ಸಿದ್ದಿ

ಶಾಂತಾರಾಂ ಸಿದ್ದಿ ಪ್ರತಿಕ್ರಿಯೆ

ಧಾರವಾಡ:ನ.26ರಂದು ಬುಡಕಟ್ಟು ಜನಾಂಗದಿಂದ ಮೈಸೂರಿನಲ್ಲಿ ಬೃಹತ್​ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಶಾಂತಾರಾಂ ಸಿದ್ದಿ ತಿಳಿಸಿದರು. ನಗರದಲ್ಲಿ ಮಾತನಾಡಿದ ಅವರು, ಮೈಸೂರಿನ ಮಹಾರಾಜ ಕಾಲೇಜು ಮೈದಾನದಿಂದ ರ‍್ಯಾಲಿ ನಡೆಯಲಿದೆ. ಸುಮಾರು 25 ಸಾವಿರಕ್ಕೂ ಹೆಚ್ಚು ಬುಡಕಟ್ಟು ಜನಾಂಗದವರನ್ನು ಸೇರಿಸಬೇಕು ಎಂಬ ವಿಚಾರ ಇದೆ ಎಂದು ಹೇಳಿದರು.

ಬುಡಕಟ್ಟು ಜನಾಂಗದವರ ಮೀಸಲಾತಿಯನ್ನು ಬೇರೆಯವರು ಪಡೆಯುತ್ತಿದ್ದಾರೆ:ರಾಜ್ಯದಲ್ಲಿ ಸುಮಾರು 52ಕ್ಕೂ ಹೆಚ್ಚು ಬುಡಕಟ್ಟು ಜನಾಂಗಗಳಿದ್ದು, 65 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇದೆ. ಈ ಎಲ್ಲ ಬುಡಕಟ್ಟು ಜನಾಂಗಗಳ 25 ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ರ‍್ಯಾಲಿಗೆ ಬರಲಿದ್ದಾರೆ. ಇದರ ಉದ್ದೇಶ ಬೇರೆಯವರು ಬುಡಕಟ್ಟು ಜನಾಂಗದವರಿಗೆ ಮೋಸ ಮಾಡಿ, ನಮ್ಮ ಜಾತಿ ಪ್ರಮಾಣ ಪತ್ರವನ್ನು ಪಡೆದುಕೊಂಡು ಮೀಸಲಾತಿಯನ್ನು ಪಡೆದುಕೊಳ್ಳುತ್ತಿದ್ದಾರೆ. ಅನ್ಯ ಧರ್ಮಿಯರು ಬುಡಕಟ್ಟು ಜನಾಂಗದವರನ್ನು ಮತಾಂತರ ಮಾಡುತ್ತಿದ್ದಾರೆ. ಬುಡಕಟ್ಟು ಜನಾಂಗಕ್ಕೆ ತಮ್ಮದೆ ಆದ ಸಂಪ್ರದಾಯ, ಸಂಸ್ಕೃತಿ ಇದೆ. ಅವರು ಒಮ್ಮೆ ಮತಾಂತರ ಆದರೆ ಇವುಗಳನ್ನು ಕಳೆದುಕೊಳ್ಳುತ್ತಾರೆ ಎಂದರು.

ಮತಾಂತರಗೊಂಡು ನಮ್ಮ ಮೀಸಲಾತಿಯನ್ನು ಪಡೆಯುವುದು ಸಂವಿಧಾನ ವಿರೋಧಿ. ಈ ರೀತಿ ಮೀಸಲಾತಿಯನ್ನು ಪಡೆಯಬಾರದು ಎಂದು ನಮ್ಮ ಹೋರಾಟ. ಬುಡಕಟ್ಟು ಜನಾಂಗದ ಸಂಸ್ಕೃತಿ, ಸಂಪ್ರದಾಯ ಉಳಿಯಬೇಕು ಎಂದು ಈ ಕಾರ್ಯಕ್ರಮ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ವಿಧಾನ ಪರಿಷತ್​ನಲ್ಲಿ ಬಿಲ್​ ಪಾಸ್​ ಆಗುವಾಗ ಮಾತ್ರ ನಮಗೆ ಬೆಲೆ:ನಾನು ಎಂಎಲ್​ಸಿ ಆಗಿ ಮೂರು ವರ್ಷ ಆಗಿದೆ. ನಮಗೆ ಹೆಚ್ಚು ಅನುದಾನ ಸಿಗುತ್ತಿಲ್ಲ. ನಾವು ಸದನದಲ್ಲಿ ಚರ್ಚೆ ಮಾಡಿ, ಮನವಿ ಮಾಡುತ್ತೇವೆ. ನಮಗೆ ವಿಧಾನ ಪರಿಷತ್​ನಲ್ಲಿ ಬಿಲ್​ ಪಾಸ್​ ಆಗುವಾಗ ಮಾತ್ರ ಬೆಲೆ. ಎಂಎಲ್​ಎಗಳಿಗೆ ಅಭಿವೃದ್ಧಿಗೆ ಎಂದು ನೂರು, ಐನೂರು ಕೋಟಿ ಅನುದಾನ ಕೊಡುತ್ತಾರೆ. ನಮಗೆ ಕೊಡುವುದು ಕೇವಲ 2 ಕೋಟಿ. ಅಭಿವೃದ್ಧಿಗಾಗಿ ನಮಗೆ ಅನುದಾನ ನೀಡಲು ಮುಖ್ಯಮಂತ್ರಿಗಳು ಮನಸ್ಸು ಮಾಡಬೇಕು. ನಾನು ಬುಡಕಟ್ಟು ಜನಾಂಗದವರಿಗಾಗಿ ಸಭೆ, ಸಮಾರಂಭ ಮಾಡಿದಾಗ ಸಚಿವರು ಬರಬೇಕಿತ್ತು, ಆದರೆ ಯಾರು ಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಹಿಂದಿನ ಸರ್ಕಾರದ ಅವಧಿಯಲ್ಲಿ ನಾನು ಸಿಎಂ ಬಳಿ ಬುಡಕಟ್ಟು ಜನರಿಗೆ ಮನೆ ಕೊಡಿ ಎಂದು ಕೇಳಲು ಹೋಗಿದ್ದೆ. ಕೊರೊನಾ ಇದೆ, ಸರ್ಕಾರ ಸಂಕಷ್ಟದಲ್ಲಿ ಇದೆ ಎಂದು ಹೇಳಿ ಕಳುಹಿಸಿದ್ದರು. ನಂತರ ಒಂದು ಜಿಲ್ಲೆಗಾದರೂ ಅನುದಾನ ನೀಡಿ ಎಂದು ಕೇಳಿದೆ ಆಯ್ತು ನೋಡೋಣ ಎಂದರು. ಆದರೆ ಇದುವರೆಗೂ ಏನೂ ಆಗಿಲ್ಲ ಎಂದರು.

ಇದನ್ನೂ ಓದಿ:ಜಾತಿಗಣತಿ ವರದಿ ಕೈ ಸೇರಿದ ಬಳಿಕ ಸೂಕ್ತ ತೀರ್ಮಾನ: ಮುಖ್ಯಮಂತ್ರಿ ಸಿದ್ದರಾಮಯ್ಯ

ABOUT THE AUTHOR

...view details