ಧಾರವಾಡ : ನಿರಂತರ ಮಳೆಯಾಗುತ್ತಿರುವ ಪರಿಣಾಮ ಜಮ್ಮು ಕಾಶ್ಮೀರದ ಅಮರನಾಥ ಮಾರ್ಗ ಮಧ್ಯೆ ಗುಡ್ಡ ಕುಸಿತ ಉಂಟಾಗಿದೆ. ಕಳೆದ ನಾಲ್ಕು ದಿನಗಳ ಹಿಂದಷ್ಟೇ ಯಾತ್ರೆ ಕೈಗೊಂಡಿದ್ದ ಧಾರವಾಡ ಮೂಲದ ಐವರು ಗೆಳೆಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸದ್ಯಕ್ಕೆ ಪಂಚತಾರ್ನಿ ಬಳಿ ಇರುವುದಾಗಿ ಮಾಹಿತಿ ನೀಡಿದ್ದಾರೆ.
ವಿಠ್ಠಲ ಬಾಚಗುಂಡಿ, ರಾಕೇಶ್ ನಾಜರೆ, ಹರೀಶ ಸಾಳುಂಕೆ, ನಾಗರಾಜ ಹಳಕಟ್ಟಿ, ಮಡಿವಾಳಪ್ಪ ಕೊಟಬಾಗಿ ತೊಂದರೆಗೆ ಸಿಲುಕಿರುವ ಯುವಕರು. ನಮಗೆ ಊಟ, ವಸತಿ ಸಮಸ್ಯೆ ಎದುರಾಗಿದೆ. ಇಲ್ಲಿನ ಸ್ಥಳೀಯರು ಊಟಕ್ಕೆ ಹೆಚ್ಚಿನ ಹಣ ಕೇಳುತ್ತಿದ್ದಾರೆ. ನಮ್ಮ ಬಳಿ ಹಣವಿಲ್ಲ. ದಿನದಿಂದ ದಿನಕ್ಕೆ ಗುಡ್ಡಕುಸಿತ ಹೆಚ್ಚಾಗುತ್ತಿದೆ. ರಾಜ್ಯಕ್ಕೆ ಕರೆತಲು ಸರ್ಕಾರ ಮುಂದಾಗಬೇಕು ಎಂದು ಮನವಿ ಮಾಡಿಕೊಂಡಿದ್ದಾಗಿ ಯುವಕರ ಸಂಬಂಧಿ ಮಹೇಶ್ ಎಂಬವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಕಾಶ್ಮೀರದ ಹಲವು ಭಾಗಗಳಲ್ಲಿ ಮಳೆಯಾಗುತ್ತಿದ್ದು, ಪ್ರತಿಕೂಲ ಹವಾಮಾನದಿಂದಾಗಿ ಬಾಲ್ಟಾಲ್ ಮತ್ತು ಪಹಲ್ಗಾಮ್ ಅವಳಿ ಮಾರ್ಗಗಳಲ್ಲಿ ಅಮರನಾಥ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ಜುಲೈ 7ರಂದು ತಿಳಿಸಿದ್ದಾರೆ. ಪ್ರಕೃತಿಯ ಮುಂದೆ ಮನುಷ್ಯ ಅಸಹಾಯಕ, ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ಯಾತ್ರಾರ್ಥಿಗಳ ಹಿತದೃಷ್ಟಿಯಿಂದ ಯಾತ್ರೆ ಸ್ಥಗಿತಗೊಳಿಸಿದ್ದೇವೆ. ಮತ್ತು ಯಾವುದೇ ಯಾತ್ರಿಕರಿಗೆ ಪವಿತ್ರ ಗುಹೆಯತ್ತ ತೆರಳಲು ಅನುಮತಿ ನೀಡುವುದಿಲ್ಲ ಎಂದು ಮಾಹಿತಿ ನೀಡಿದ್ದರು.
ಇದನ್ನೂ ಓದಿ :ಅಮರನಾಥ ಯಾತ್ರೆಯಲ್ಲಿ ಹವಾಮಾನ ವೈಪರೀತ್ಯ.. ಸಂಕಷ್ಟಕ್ಕೆ ಸಿಲುಕಿದ ಕನ್ನಡಿಗರು; ಅಗತ್ಯ ಕ್ರಮಕ್ಕೆ ಸಿಎಂ ಸೂಚನೆ