ದಾವಣಗೆರೆ:ರಾಜ್ಯದಲ್ಲಿ ಮಂದಿರ, ಮಸೀದಿ ವಿಚಾರ ಚರ್ಚೆ ನಡೆಯುತ್ತಿದೆ. ಇದಕ್ಕೆ ಸಂಬಂಧಪಟ್ಟವರು ಉತ್ತರ ನೀಡಿದ್ದಾರೆ. ಈ ವಿಚಾರ ಬೀದಿಗೆ ಬಂದ್ರೆ ಮಾತ್ರ ನಮ್ಮದು, ಅಂದ್ರೆ ಗೃಹ ಇಲಾಖೆಯ ಪಾತ್ರ ಬರುತ್ತೆ. ರಾಜ್ಯದಲ್ಲಿ ಸದ್ಯಕ್ಕೆ ಯಾವುದೇ ಕೋಮುಗಲಭೆ ಅಥವಾ ಹಿಜಾಬ್ ವಿವಾದ ಇಲ್ಲ. ಕಾನೂನು ಸುವ್ಯವಸ್ಥೆ ಸರಿಯಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ.
ಎಸ್ಪಿ ಕಚೇರಿಯಲ್ಲಿಂದು ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿದ ನಂತರ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. ಶಿಕ್ಷಣ ಸಚಿವ ಬಿ ಸಿ ನಾಗೇಶ್ ಮನೆಗೆ ಹೋಗಿ ಕಾಂಗ್ರೆಸ್ ಮಾಡಿರುವ ಹೋರಾಟ ಸರಿಯಿಲ್ಲ. ಅಕ್ರಮವಾಗಿ ಮನೆಗೆ ನುಗ್ಗಿ ಅವರ ಚಡ್ಡಿ ತಂದು ಸುಟ್ಟಿದ್ದು ಸರಿಯಲ್ಲ. ಮೇಲಾಗಿ ಅವರ್ಯಾರು ಸಹ ವಿದ್ಯಾರ್ಥಿಗಳೇ ಅಲ್ಲ. ದಾವಣಗೆರೆಯ ಮೂರು ಜನ ಕೂಡ ಇದರಲ್ಲಿ ಭಾಗಿಯಾಗಿದ್ದಾರೆ. ಇವರೆಲ್ಲರ ಹಿನ್ನೆಲೆ ಬಗ್ಗೆ ತನಿಖೆ ನಡೆಯುತ್ತಿದೆ. ಹೋರಾಟಕ್ಕೆ ಒಪ್ಪಿಗೆ ಪಡೆದುಕೊಂಡಿಲ್ಲ ಎಂದರು.
ಪಿಎಸ್ಐ ನೇಮಕಾತಿ ಹಗರಣ:ರಾಜ್ಯದಲ್ಲಿ ನಡೆದ ಪಿಎಸ್ಐ ನೇಮಕಾತಿಯಲ್ಲಿ ನಡೆದ ಹಗರಣದ ಬಗ್ಗೆ ಸೂಕ್ತ ತನಿಖೆ ನಡೆಯುತ್ತಿದೆ. ಇಂತಹ ಅವ್ಯವಹಾರ ಮೊದಲಿನಿಂದಲೇ ನಡೆದುಕೊಂಡು ಬಂದಿದೆ. ಆದ್ರೆ ಅಂತವರು ಮುಟ್ಟಿಕೊಂಡು ನೋಡಿಕೊಳ್ಳುವಂತೆ ಮಾಡುತ್ತೇವೆ. ನಮ್ಮ ಇಲಾಖೆ ಡಿವೈಎಸ್ಪಿಗಳನ್ನೇ ಬಂಧಿಸಿದೆ. ತನಿಖಾ ತಂಡ ಕೂಡ ಚೆನ್ನಾಗಿ ಕೆಲಸ ಮಾಡುತ್ತಿದೆ ಎಂದು ಸಿಐಡಿ ತಂಡದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ರು.