ದಾವಣಗೆರೆ:ಭದ್ರಾ ಜಲಾಶಯದ ಅಣೆಕಟ್ಟು ರೈತರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ಭದ್ರಾ ಎಡ ಹಾಗೂ ಬಲದಂಡೆ ನಾಲೆಗಳಿಗೆ ನೀರು ಹರಿಸುವುದಾಗಿ ರೈತರಿಗೆ ಆಶ್ವಾಸನೆ ನೀಡಿದ್ದ ರಾಜ್ಯ ಸರ್ಕಾರ, ಮುಂಗಾರ ಹಂಗಾಮಿನ ಬೆಳೆಗಳನ್ನು ಬೆಳೆಯಲು ಇಂದಿನಿಂದ ಒಟ್ಟು ನೂರು ದಿನಗಳ ಕಾಲ ನೀರು ಹರಿಸಲಿದೆ.
ಮುಂಗಾರು ಹಂಗಾಮಿನ ಬೆಳೆಗಳಿಗೆ ಭದ್ರಾ ಜಲಾಶಯದ ಎಡದಂಡೆ ಮತ್ತು ಬಲದಂಡೆ ನಾಲೆ, ಅನವೇರಿ ಶಾಖಾನಾಲೆ, ದಾವಣಗೆರೆ ಶಾಖಾನಾಲೆ, ಹರಿಹರ ತಾಲೂಕಿನ ಮಲೇಬೆನ್ನೂರು ಶಾಖಾನಾಲೆ ಹರ, ನಾರಾಣಿ ಮತ್ತು ಗೋಂದಿ ನಾಲೆಗಳಿಗೆ ನೀರು ಹರಿಸಲು ತೀರ್ಮಾನಿಸಿ ಕರ್ನಾಟಕ ನೀರಾವರಿ ನಿಗಮ ನಿಯಮಿತ ಆದೇಶ ಹೊರಡಿಸಿದೆ.
ಇನ್ನು ನಿಗದಿತ ಪ್ರಮಾಣಕ್ಕಿಂತ ಹೆಚ್ಚು ನೀರನ್ನು ಬಳಸುವವರು ಮತ್ತು ನೀರಾವರಿ ಬೆಳಗಾರರು ವಿವಿಧ ನಿಯಮಗಳ ಪ್ರಕಾರ ಕಾನೂನು ಕ್ರಮಕ್ಕೆ ಒಳಗಾಗುತ್ತಾರೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಮುಂಗಾರು ಹಂಗಾಮಿನ ಬೆಳೆಗಳಿಗೆ ಆಗಸ್ಟ್ 10 ರಿಂದ ಎಂದರೆ ಇಂದಿನಿಂದ ಮುಂದಿನ ನೂರು ದಿನಗಳ ಕಾಲ ಭದ್ರಾ ಜಲಾಶಯದಿಂದ ಎಡದಂಡೆಯ ನಾಲೆಗೆ 380 ಹಾಗೂ ಬಲದಂಡೆ ನಾಲೆಯಲ್ಲಿ 2,650 ಕ್ಯೂಸೆಕ್ ನೀರನ್ನು ಮುಂಗಾರು ಬೆಳೆಗಳನ್ನು ಬೆಳೆಯಲು ಒಟ್ಟು 100 ದಿನಗಳ ಕಾಲ ( ಮೂರು ತಿಂಗಳು ಹತ್ತು ದಿನ) ನೀರನ್ನು ಹರಿಸಲಾಗುವುದು ಎಂದು ಸರ್ಕಾರ ಹೊರಡಿರುವ ಆದೇಶದಲ್ಲಿ ತಿಳಿಸಲಾಗಿದೆ.