ದಾವಣಗೆರೆ: ಮುಖ್ಯಮಂತ್ರಿ ಬದಲಾವಣೆ ಚರ್ಚೆಯ ನಡುವೆ ವಿಜಯಪುರದ ಶಾಸಕರು, ನೀನು ನನ್ನ ಜೊತೆ ಚೆನ್ನಾಗಿರು, ನಿನ್ನನ್ನು ಮಂತ್ರಿ ಮಾಡ್ತೀನಿ ಎಂದು ತಿಳಿಸಿರುವುದಾಗಿ ರೇಣುಕಾಚಾರ್ಯ ಹೇಳಿದ್ದಾರೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಅರಬಗಟ್ಟೆ ಕೋವಿಡ್ ಕೇರ್ ಸೆಂಟರ್ ಬಳಿ ಮಾಧ್ಯಮದವರೊಂದಿಗೆ ಮಾತನಾಡುತ್ತಾ ಈ ವಿಷಯ ಹಂಚಿಕೊಂಡರು.
ವಿಜಯಪುರದ ಶಾಸಕ ಹಾಗು ಧಾರವಾಡದ ಶಾಸಕರಿಬ್ಬರು ಜೇಬಿನಲ್ಲಿ ಚೀಟಿ ಇಟ್ಕೊಂಡು ನಾವೇ ಮುಂದಿನ ಮುಖ್ಯಮಂತ್ರಿ ಎಂದು ವಿಧಾನಸೌಧದ ಮೊಗಸಾಲೆಯಲ್ಲಿ ತಿರುಗಾಡಿದ್ರು. ನನಗೆ ಕರೆ ಮಾಡಿ ನಾನೇ ಮುಂದಿನ ಮುಖ್ಯಮಂತ್ರಿ, ನನ್ನ ಜೊತೆ ಚೆನ್ನಾಗಿರು ನಿನ್ನನ್ನು ಮಂತ್ರಿ ಮಾಡ್ತಿನಿ ಎಂದು ಗೊಂದಲದ ಹೇಳಿಕೆಗಳನ್ನು ಕೊಡ್ತಾರೆ ಎಂದು ತಿಳಿಸಿದರು.
ಯಡಿಯೂರಪ್ಪ ಅವರ ಪರವಾಗಿ 65 ಶಾಸಕರ ಸಹಿ ಸಂಗ್ರಹಿಸಿದ್ದು ಸತ್ಯ. ಸಿಎಂ ಹಾಗೂ ಪಕ್ಷದ ವರಿಷ್ಠರು ಹೇಳಿದ್ದಕ್ಕೆ ಸುಮ್ನಾಗಿದ್ದೇವೆ. ಈಗಾಗಲೇ ನನಗೆ ಪಕ್ಷದ ರಾಜ್ಯ ಉಸ್ತುವಾರಿ ಸಮಯ ನೀಡಿದ್ದಾರೆ. ಮೇಲಾಗಿ ನಮ್ಮ ಎಲ್ಲ ಶಾಸಕರು ಒಟ್ಟಾಗಿ ಉಸ್ತುವಾರಿ ಅರುಣ್ ಸಿಂಗ್ ಅವರಿಗೆ ಮನವರಿಕೆ ಮಾಡಿಕೊಡುತ್ತೇವೆ. ಯಡಿಯೂರಪ್ಪ ಅವರ ನಾಯಕತ್ವ ಬದಲಾವಣೆ ಸಾಧ್ಯವೇ ಇಲ್ಲ. ಯಾರೋ ಇಬ್ಬರು ಮೂವರು ದೆಹಲಿಗೆ ಹೋಗಿ ವರಿಷ್ಠರ ಮನೆ ಗೇಟ್ ಮುಟ್ಟಿ ಬಂದರೆ ಬದಲಾವಣೆ ಅಸಾದ್ಯ. ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ. ತಿರುಕನ ಕನಸು ಕಾಣುತ್ತಿರುವುದು ವಿಚಿತ್ರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ:ಪಕ್ಷದ ಆಂತರಿಕ ಗೊಂದಲಕ್ಕೆ ತಲೆಕೆಡಿಸಿಕೊಳ್ಳದ ಸಿಎಂ: ರಾಜಕೀಯ ಚಟುವಟಿಕೆ ನಡುವೆ BSY ಕೂಲ್