ದಾವಣಗೆರೆ: ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಶೀಲನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಸಮರ್ಪಕವಾಗಿ ಕಾರ್ಯನಿರ್ವಹಿಸದ ಅಧಿಕಾರಿಗಳು, ಸಿಬ್ಬಂದಿಗೆ ನೋಟಿಸ್ ನೀಡಲಾಗಿದ್ದು, ಚುರುಕಾಗಿ ಪಟ್ಟಿ ಪರಿಶೀಲನೆಗೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಕರ್ತವ್ಯಲೋಪ ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಅ.15ಕ್ಕೆ ಮತದಾರರ ಪಟ್ಟಿಯ ಕರಡು ಪಟ್ಟಿ ಪ್ರಕಟಿಸಲಾಗುವುದು. ಉಳಿದ ಮೂರು ದಿನಗಳಲ್ಲಿ ಅಧಿಕಾರಿಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು ಎಂದು ನಿರ್ದೇಶನ ನೀಡಿದ್ದಾರೆ.
ಜಿಲ್ಲಾಧಿಕಾರಿ ಮಹಾಂತೇಶ್ ಬಿಳಗಿ 7ನೇ ಸ್ಥಾನದಲ್ಲಿ ದಾವಣಗೆರೆ
ದಾವಣಗೆರೆಯಲ್ಲಿಕನಿಷ್ಠ 8 ಲಕ್ಷ ಮತದಾರರನ್ನು ನೊಂದಾಯಿಸುವ ಗುರಿ ಹೊಂದಲಾಗಿದೆ. ಪಟ್ಟಿ ಪರಿಶೀಲನಾ ಕಾರ್ಯಕ್ರಮದಲ್ಲಿ ರಾಜ್ಯದ 33 ಕೇಂದ್ರಗಳ ಪೈಕಿ ಜಿಲ್ಲೆ 7ನೇ ಸ್ಥಾನದಲ್ಲಿದೆ. ಮುಂದಿನ ದಿನಗಳಲ್ಲಿ 2 ಅಥವಾ 3ನೇ ಸ್ಥಾನಕ್ಕೆ ಬರಲು ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಒಟ್ಟು 16,32,474 ಮತದಾರರ ಪೈಕಿ 3,77,898 ಮತದಾರರು ವಿವಿಧ ಸೌಲಭ್ಯಗಳನ್ನು ಬಳಸಿಕೊಂಡು ಮತದಾರರ ಪಟ್ಟಿ ಪರಿಶೀಲಿಸಿಕೊಂಡಿದ್ದಾರೆ.
ಉಳಿದ 12,54,576 ಮತದಾರರು ಇನ್ನೂ ಪರಿಶೀಲನೆ ಮಾಡಿಕೊಂಡಿಲ್ಲ. ಜಿಲ್ಲೆಯಲ್ಲಿ ಹರಿಹರ ಮೊದಲನೇ ಸ್ಥಾನದಲ್ಲಿದ್ದು, ಚನ್ನಗಿರಿ ಎರಡನೇ ಸ್ಥಾನದಲ್ಲಿದೆ, ಉಳಿದಂತೆ ದಾವಣಗೆರೆ, ಉತ್ತರ ಹಾಗೂ ದಕ್ಷಿಣ ಕ್ಷೇತ್ರಗಳು ಸಾಧನೆಯಲ್ಲಿ ತೀರ ಹಿಂದಿದ್ದು, ಇದಕ್ಕೆ ಬಿಎಲ್‍ಒಗಳು ಸರಿಯಾಗಿ ಸಹಕಾರ ನೀಡುತ್ತಿಲ್ಲವೆಂದು ದೂರುಗಳು ಕೇಳಿಬರುತ್ತಿವೆ.
ಮತದಾರರು ಗುರುತಿನ ಚೀಟಿಯಲ್ಲಿ ತಮ್ಮ ವಿವರಗಳನ್ನು ವೋಟರ್ ಹೆಲ್ಪ್‌ಲೈನ್ ಮೊಬೈಲ್ ಆ್ಯಪ್, ಎನ್.ವಿ.ಎಸ್.ಪಿ ಪೋರ್ಟಲ್, (www.nvsp.in), ಸಿ.ಎಸ್.ಸಿ. ಕೇಂದ್ರಗಳು, ಮತದಾರರ ನೋಂದಣಾಧಿಕಾರಿಗಳು ಹಾಗೂ ಸಹಾಯಕ ಮತದಾರರ ನೋಂದಣಾಧಿಕಾರಿ ಕಚೇರಿಯಲ್ಲಿ ಸ್ಥಾಪಿತವಾಗಿರುವ ವಿ.ಎಫ್.ಸಿ (ವೋಟರ್ ಫೆಸಿಲಿಟೇಷನ್ ಸೆಂಟರ್) ಕೇಂದ್ರಗಳಲ್ಲಿ ಹಾಗೂ ಉಚಿತ ಸಹಾಯವಾಣಿ1950ಕ್ಕೆ ಕರೆ ಮಾಡುವ ಮೂಲಕ ಪರಿಶೀಲಿಸಿಕೊಳ್ಳಬಹುದಾಗಿದೆ.
ಮತಗಟ್ಟೆ ಮಟ್ಟದ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಮತದಾರರ ಹೆಸರು ನೋಂದಣಿಗೆ ಅಥವಾ ತಿದ್ದುಪಡಿಗೆ ಅಗತ್ಯ ದಾಖಲೆಗಳನ್ನು ನೀಡಿ ದೋಷರಹಿತವಾದ ಮತದಾರರ ಪಟ್ಟಿ ಹಾಗೂ ಎಲ್ಲಾ ಅರ್ಹ ಮತದಾರರನ್ನೊಳಗೊಂಡ ಪಟ್ಟಿ ಸಿದ್ಧಪಡಿಸಲು ಸಾರ್ವಜನಿಕರು ಸಹಕರಿಸಬೇಕು ಎಂದರು.