ದಾವಣಗೆರೆ: ಆ ಬಡ ರೈತ ಮಹಿಳೆ ತಮ್ಮ ಅರ್ಧ ಎಕರೆ ಜಮೀನಿನಲ್ಲಿ 40 ಸಾವಿರ ವ್ಯಯ ಮಾಡಿ ಮೆಣಸಿನಕಾಯಿ ಬೆಳೆ ಬೆಳೆದಿದ್ದಳು. ಆದರೆ ಆ ಬೆಳೆಗೆ ಮಣ್ಣು ಸಾಗಣೆ ಲಾರಿಗಳೇ ಕಂಠಕವಾಗಿವೆ. ಲಾರಿ ಚಾಲನೆಯಿಂದ ಏಳುವ ಧೂಳಿನಿಂದ ಬೇಸತ್ತ ಆ ರೈತ ಮಹಿಳೆ ಏಕಾಂಗಿಯಾಗಿ ಹೋರಾಟಕ್ಕಿಳಿದು ಬೃಹತ್ ಲಾರಿಗಳ ವಿರುದ್ಧ ತೊಡೆತಟ್ಟಿದ್ದಾರೆ. ಮಣ್ಣು ಸಾಗಣೆ ಮಾಡ್ಬೇಕಾದ್ರೇ ಧೂಳುಮಯವಾಗಿರುವ ರಸ್ತೆಗೆ ಧೂಳು ಏಳದಂತೆ ನೀರು ಸಿಂಪಡಿಸಿ ಲಾರಿಗಳನ್ನು ಚಲಾಯಿಸಿ ಎಂದು ಖಡಕ್ ಆಗಿ ವಾರ್ನಿಂಗ್ ನೀಡಿದ್ದಾರೆ.
ಮಣ್ಣು ಸಾಗಣೆ ಲಾರಿಗಳ ಧೂಳಿನಿಂದ ತಮ್ಮ ಅರ್ಧ ಎಕರೆ ಜಮೀನಿನಲ್ಲಿ ಬೆಳೆದ ಮೆಣಸಿನಕಾಯಿ ಬೆಳೆಯನ್ನು ರಕ್ಷಿಸಲು ಬಡರೈತ ಮಹಿಳೆ ಬೃಹತ್ ಲಾರಿಗಳ ವಿರುದ್ಧ ಸಮರ ಸಾರಿದ್ದಾಳೆ. ಜಿಲ್ಲೆಯ ಹರಿಹರ ತಾಲೂಕಿನ ಸಾರಥಿ ಗ್ರಾಮದ ಮಹಿಳೆ ಕೊಟ್ರಮ್ಮ ತಮ್ಮ ಜಮೀನಿನ ಮೂಲಕ ಹಾದುಹೋಗುವ ಲಾರಿಗಳಿಂದ ಬೇಸತ್ತು ತಿಂಗಳಿನಿಂದ ಪ್ರತಿಭಟನೆ ಮಾಡ್ತಿದ್ದಾರೆ. ಏಕಾಂಗಿಯಾಗಿ ರಸ್ತೆಗಿಳಿದ ಗಟ್ಟಿಗಿತ್ತಿ ಕೊಟ್ರಮ್ಮ ಲಾರಿಯನ್ನು ತಡೆದು ಆಕ್ರೋಶ ಹೊರಹಾಕುತ್ತಿದ್ದಾರೆ.
ಸಮಸ್ಯೆ ಏನು?:ರೈತರು ಇಟ್ಟಿಗೆ ಭಟ್ಟಿಗಳಿಗೆ ಮಣ್ಣು ಸಾಗಿಸಲು ಒಂದು ಟಿಪ್ಪರ್ ಲೋಡ್ಗೆ ಆರು ಸಾವಿರ ನಿಗದಿ ಮಾಡಲಾಗಿದೆ. ಆ ಮಣ್ಣಿನ ಲೋಡ್ಗಳು ಕೊಟ್ರಮ್ಮರ ಹೊಲದ ಮೂಲಕವೇ ಹಾದು ಹೋಗುತ್ತಿರುವುದರಿಂದ ಇಡೀ ಧೂಳು ಮೆಣಸಿನಕಾಯಿ ಬೆಳೆ ಮೇಲೆ ಕೂರುತ್ತಿದೆ. ಇದು ರೈತ ಮಹಿಳೆ ಕೊಟ್ರಮ್ಮ ಅವರನ್ನು ಚಿಂತೆಗೀಡು ಮಾಡಿದೆ.
ಸತತವಾಗಿ ಒಂದು ತಿಂಗಳಿನಿಂದ ರೈತರ ಹೊಲದಿಂದಲೇ ಅನಧಿಕೃತವಾಗಿ ಮಣ್ಣು ಹೊಡೆಯಲಾಗುತ್ತಿದ್ದು, ಇಟ್ಟಿಗೆ ಭಟ್ಟಿಗೆ ಸಾಗಿಸಲಾಗುತ್ತಿದೆ. ಆದರೆ, ಈ ಮಣ್ಣು ಮಾಫಿಯಾದಿಂದ ರೈತ ಮಹಿಳೆ ಕೊಟ್ರಮ್ಮ ತಮ್ಮ 40 ಸಾವಿರ ವ್ಯಯ ಮಾಡಿದ ಮೆಣಸಿನಕಾಯಿ ಬೆಳೆ ಮಾತ್ರ ಹಾಳಾಗುತ್ತಿದೆಯಂತೆ. ಅನ್ನ ನೀಡುವ ಭೂಮಿ ತಾಯಿಯ ಸಮಾನ, ಮಣ್ಣು ಮಾರಿಕೊಂಡರೆ ಅವರ ಜಮೀನು ಹಾಳಾಗುತ್ತದೆ ಎನ್ನುತ್ತಾರೆ ಕೊಟ್ರಮ್ಮ.