ದಾವಣಗೆರೆ: ಇಲ್ಲಿನ ಭಗತ್ ಸಿಂಗ್ ನಗರದ ನಿವಾಸಿಯಾದ ಶೌಕತ್ ಅಲಿ ಅವರ ಮಗ ಅಬೀದ್ ಅಲಿ ಎಂಬುವವರು ಉಕ್ರೇನ್ ದೇಶದ ಚರ್ನಿವಿತ್ಸಿ ನಗರದ ಬುಕವಿನಿಯನ್ ಸ್ಟೇಟ್ ಮೆಡಿಕಲ್ ಯುನಿವರ್ಸಿಟಿಯಲ್ಲಿ ಎಂಬಿಬಿಎಸ್ ಕಲಿಯಲು ತೆರಳಿದ್ದರು. ಇದೀಗ ಯುದ್ಧ ಆರಂಭವಾಗಿದ್ದರಿಂದ ಪೋಷಕರು ಆತಂಕದಲ್ಲಿ ಕಾಲ ಕಳೆಯುವಂತಾಗಿದೆ.
ದೂರವಾಣಿ ಮೂಲಕ ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ನನ್ನ ಪುತ್ರ ಮಹ್ಮದ್ ಅಬೀದ್ ಅಲಿ ಉಕ್ರೇನ್ ಗೆ ಹೋಗಿ ಆರು ತಿಂಗಳಾಗಿದೆ. ಒಂದು ಸೆಮ್ ಮುಕ್ತಾಯವಾಗಿದೆ. ಉಕ್ರೇನ್ ಪರಿಸ್ಥಿತಿ ನೋಡಿ ಕಳೆದ ತಿಂಗಳೇ ಮಗನನ್ನ ಕರೆತರುವ ಯೋಜನೆ ಇತ್ತು. ಆದರೆ, ವಿಶ್ವವಿದ್ಯಾಲಯದವರು ನಮಗೆ ಏನು ಆಗಲ್ಲ ಎಂದು ವಿಶ್ವಾಸ ನೀಡಿದರು. ಹಾಗಾಗಿ ಸುಮ್ಮನಾದೆವು. ಹೋಗುವವರೋ ಹೋಗಬಹುದು ಅಂತಾ ವಿವಿಯವರು ಕಳೆದ ದಿನ ಹೇಳಿದ್ದಾರೆ. ನಾಳೆ 25ಕ್ಕೆ ಟಿಕೆಟ್ ಬುಕ್ ಆಗಿತ್ತು. ಆದರೆ ಆ ಫ್ಲೈಟ್ ಕ್ಯಾನ್ಸಲ್ ಆಗಿದೆ. ಆತಂಕ ಪಡುವ ಅಗತ್ಯವಿಲ್ಲ. ಮಗ ಸುರಕ್ಷಿತವಾಗಿ ಮನೆಗೆ ಬರುತ್ತಾನೆ ಎಂಬ ವಿಶ್ವಾಸವಿದೆ ಎಂದು ಪೋಷಕರು ಹೇಳಿದ್ದಾರೆ.