ಬೆಂಗಳೂರು :ದಿನೇದಿನೆ ವಿವಿಧ ರೂಪ ಪಡೆಯುತ್ತಾ ಅವಾಂತರ ಸೃಷ್ಟಿಸುತ್ತಿರುವ ಕೊರೊನಾ ಕಾಳಸಂತೆಕೋರರಿಗೆ, ಮಧ್ಯವರ್ತಿಗಳಿಗೆ ರತ್ನಗಂಬಳಿ ಹಾಸಿದಂತಾಗಿದೆ. ಆಸ್ಪತ್ರೆಗಳಲ್ಲಿ ಬೆಡ್ ಬ್ಲಾಕಿಂಗ್ ದಂಧೆ, ರೆಮ್ಡೆಸಿವಿರ್ ಅಕ್ರಮ ಮಾರಾಟ ಎಗ್ಗಿಲ್ಲದೆ ನಡೆಯುತ್ತಿರುವುದು ಈಗಾಗಲೇ ಜಗಜ್ಜಾಹೀರಾಗಿದೆ. ಇಂತಹ ದಂಧೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸರ್ಕಾರ ಕ್ರಮಕೈಗೊಳ್ಳುತ್ತಿದೆ.
ಕಳೆದ ಕೆಲ ದಿನಗಳ ಹಿಂದೆ ರಾಜ್ಯ ರಾಜಧಾನಿಯಲ್ಲಿ ಸೋಂಕಿತರ ಪ್ರಮಾಣ ವಿಪರೀತವಾಗಿ ಹೆಚ್ಚಿತ್ತು. ಬೆಡ್ಗೆ ಬೇಡಿಕೆ ಹೆಚ್ಚಾಗಿದ್ದನ್ನೇ ಬಂಡವಾಳ ಮಾಡಿಕೊಂಡ ಕೆಲವರು, ಬೆಡ್ ಬ್ಲಾಕಿಂಗ್ ದಂಧೆ ನಡೆಸಿರೋದು ಬಯಲಾಗಿತ್ತು. ಅಲ್ಲದೆ ರೆಮ್ಡೆಸಿವಿರ್ ಅಕ್ರಮ ಮಾರಾಟವೂ ಬೆಳಕಿಗೆ ಬಂದಿತ್ತು. ಅಕ್ರಮ ದಂಧೆ ಬಯಲಿಗೆ ಬರುತ್ತಿದ್ದಂತೆ ಸರ್ಕಾರ, ಈ ದಂಧೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗಿದೆ.