ಯತ್ನಾಳ್ ವಿರುದ್ಧ ಬಿಜೆಪಿ ನಾಯಕರ ಆಕ್ರೋಶ ದಾವಣಗೆರೆ:ಬಸನಗೌಡ ಪಾಟೀಲ್ ಯತ್ನಾಳ್ ಪ್ರತಿದಿನ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ಮಾಜಿ ಸಿಎಂ ಯಡಿಯೂರಪ್ಪನವರ ವಿರುದ್ಧ ವಿನಾಕಾರಣ ಹೇಳಿಕೆ ನೀಡುತ್ತಿದ್ದಾರೆ. ಹತಾಶೆಯ ಮನೋಭಾವವೇ ಇದಕ್ಕೆ ಕಾರಣ ಎಂದು ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ವಾಗ್ದಾಳಿ ನಡೆಸಿದರು.
ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಯತ್ನಾಳ್ ಅಧಿವೇಶನದೊಳಗೆ ಮತ್ತು ಹೊರಗೆ ಟೀಕೆ ಮಾಡಲು ಸಮಯ ಬಳಸಿಕೊಂಡಿದ್ದಾರೆ. ಏಕವಚನದಲ್ಲೇ ಹೇಳಿಕೆ ನೀಡುತ್ತಿದ್ದಾರೆ. ಕೋವಿಡ್ ಸಂದರ್ಭದಲ್ಲಿ 40 ಸಾವಿರ ಕೋಟಿ ರೂ ಅವ್ಯವಹಾರ ಆಗಿದೆ ಎಂಬುದು ಸತ್ಯಕ್ಕೆ ದೂರವಾದದ್ದು. ಕೋವಿಡ್ನಲ್ಲಿ ಅವ್ಯವಹಾರ ಆಗಿಲ್ಲ. ಬೇಕಾದರೆ ದಾಖಲೆಸಮೇತ ಚರ್ಚೆ ಮಾಡಲು ನಾನು ಸಿದ್ಧ ಎಂದರು.
ರಾಜ್ಯದಲ್ಲಿ ವಿಜಯೇಂದ್ರ ಅಧ್ಯಕ್ಷರಾಗಿದ್ದು ನಿಮಗೆ ತಡೆದುಕೊಳ್ಳಲು ಆಗುತ್ತಿಲ್ಲ. ನೀವು ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿರಬೇಕು. ಅದಕ್ಕೆ ಈ ರೀತಿ ವರ್ತಿಸುತ್ತಿದ್ದೀರಿ. ಯಡಿಯೂರಪ್ಪ ಅವರು ವಿಜಯೇಂದ್ರ ಅವರನ್ನು ಅಧ್ಯಕ್ಷರನ್ನಾಗಿ ಮಾಡಿಲ್ಲ. ಮೋದಿಯವರು ಅವರನ್ನು ಆಯ್ಕೆ ಮಾಡಿದ್ದು. ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಂಡು ಪಕ್ಷಕ್ಕೆ ದ್ರೋಹ ಮಾಡ್ತಿದ್ದೀರಾ ಎಂದು ಹೇಳಿದರು.
ನಮಗೆ ಕಾರ್ಯಕರ್ತರೇ ದೂರವಾಣಿ ಕರೆ ಮಾಡಿ ಯತ್ನಾಳ್ ಹೇಳಿಕೆಗಳಿಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕೇಸರಿ ಧ್ವಜ ಹಾರಿಸಿದ್ರೆ ಕ್ರಮ ಎನ್ನುವ ಸಚಿವ ದಿನೇಶ್ ಗುಂಡೂರಾವ್ ವಿರುದ್ಧ ಹೋರಾಟ ಮಾಡೋಣ ಎಂದು ಹೇಳಿ, ಅದನ್ನು ಬಿಟ್ಟು ಯಡಿಯೂರಪ್ಪ ಟೀಕಿಸುವುದು ಸರಿಯಲ್ಲ. ನಿಮಗೆ ವಿಧಾನಸಭೆ ಚುನಾವಣೆ ಸ್ಪರ್ಧಿಸಲು ಟಿಕೆಟ್ ಕೊಡಿಸಿದ್ದೇ ಯಡಿಯೂರಪ್ಪ ಎಂದರು.
ಯತ್ನಾಳ್ ವಿರುದ್ದ ಶಿಸ್ತುಕ್ರಮ ಕೈಗೊಳ್ಳಲು ಪಕ್ಷದೊಂದಿಗೆ ಚರ್ಚಿಸುತ್ತೇವೆ. ನೋಟಿಸ್ ಕೊಡಲು ಹೈಕಮಾಂಡ್ಗೆ ತಾಕತ್ ಇದೆ. ಹೈಕಮಾಂಡ್ ಎಲ್ಲವನ್ನೂ ನೋಡುತ್ತಿದೆ ಎಂದು ಹೇಳಿದರು.
ಕಾಂಗ್ರೆಸ್-ಯತ್ನಾಳ್ ಮಧ್ಯೆ ಮ್ಯಾಚ್ ಫಿಕ್ಸಿಂಗ್-ವಿರೂಪಾಕ್ಷಪ್ಪ ಬಳ್ಳಾರಿ: ಬ್ಯಾಡಗಿ ಕ್ಷೇತ್ರದ ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, ಕಾಂಗ್ರೆಸ್ ಹಾಗು ಯತ್ನಾಳ್ ಮಧ್ಯೆ ಮ್ಯಾಚ್ ಫಿಕ್ಸಿಂಗ್ ಆಗಿದೆ. ನೀವು ಬೇಕಾದರೆ ನಮ್ಮ ಪಕ್ಷದಲ್ಲಿ ಇರಬಹುದು ಇಲ್ಲವೇ ಹೋಗಬಹುದು. ಮಾತನಾಡುವ ವೇಳೆ ನಾಲಿಗೆ ಹಿಡಿತದಲ್ಲಿರಬೇಕು. ರಾಜ್ಯ ಬಿಜೆಪಿ ಅಧ್ಯಕ್ಷ ಅಥವಾ ವಿಪಕ್ಷ ನಾಯಕ ಆಗ್ಬೇಕೆಂದು ಕನಸು ಇಟ್ಟುಕೊಂಡಿದ್ದರು. ಆದರೆ ಅದು ಆಗಲಿಲ್ಲ. ಅದಕ್ಕೆ ಈ ರೀತಿ ಹೇಳಿಕೆಗಳನ್ನು ಯತ್ನಾಳ್ ಕೊಡ್ತಿದ್ದಾರೆ ಎಂದು ಟೀಕಿಸಿದರು.
ಇದನ್ನೂ ಓದಿ:ಬಿಜೆಪಿ ನೂತನ ಪದಾಧಿಕಾರಿಗಳ ಮೊದಲ ಸಭೆಯಲ್ಲೇ ಯತ್ನಾಳ್ ಬಗ್ಗೆ ಗಂಭೀರ ಚರ್ಚೆ