ಕರ್ನಾಟಕ

karnataka

ಬಿಜೆಪಿ ಶಾಸಕ ರಾಮಚಂದ್ರ  ಸೋಲಿಸಿದ ನಿವೃತ್ತ ಜವಾನ

By

Published : May 15, 2023, 3:30 PM IST

ಬಿಜೆಪಿ ಶಾಸಕ ಎಸ್ ವಿ ರಾಮಚಂದ್ರ ವಿರುದ್ದ ಕಾಂಗ್ರೆಸ್ ಅಭ್ಯರ್ಥಿ ನಿವೃತ್ತ ಜವಾನ ಬಿ ದೇವೇಂದ್ರಪ್ಪ ಗೆಲುವು ಸಾಧಿಸಿದ್ದಾರೆ.

b-devendrappa-won-against-bjp-candidate-sv-ramachandra-jagaluru-constituency
ಬಿಜೆಪಿ ಶಾಸಕ ರಾಮಚಂದ್ರರನ್ನು ಸೋಲಿಸಿದ ನಿವೃತ್ತ ಜವಾನ

ದಾವಣಗೆರೆ: ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬಿದ್ದಿದೆ. ಕಾಂಗ್ರೆಸ್​​ 135 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಭರ್ಜರಿ ಗೆಲುವು ಸಾಧಿಸಿದೆ. ಆಡಳಿತಾರೂಢ ಬಿಜೆಪಿ ಕೇವಲ 66 ಕ್ಷೇತ್ರಗಳಿಗೆ ತೃಪ್ತಿಪಟ್ಟುಕೊಂಡಿದೆ. ಈಗಾಗಲೇ ಕಾಂಗ್ರೆಸ್​​ನಲ್ಲಿ ಸಿಎಂ ಆಯ್ಕೆ ಕುರಿತು ಕಸರತ್ತು ನಡೆಯುತ್ತಿದ್ದು, ಈ ಸಂಬಂಧ ಮಾಜಿ ಸಿಎಂ ಸಿದ್ದರಾಮಯ್ಯ ಈಗಾಗಲೇ ಕಾಂಗ್ರೆಸ್​ ಹೈಕಮಾಂಡ್ ಅ​ನ್ನು ಭೇಟಿ ಮಾಡಲು ದೆಹಲಿಗೆ ತೆರಳಿದ್ದಾರೆ.

ಜಿಲ್ಲೆಯ ಜಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್​ ಮತ್ತು ಬಿಜೆಪಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಅದರಂತೆ ಬಿಜೆಪಿ ಶಾಸಕ ಎಸ್.ವಿ ರಾಮಚಂದ್ರ ವಿರುದ್ದ ಕಾಂಗ್ರೆಸ್ ಅಭ್ಯರ್ಥಿ ಬಿ. ದೇವೇಂದ್ರಪ್ಪ ಗೆಲುವು ಸಾಧಿಸಿದ್ದಾರೆ. ನಿವೃತ್ತ ಜವಾನರಾಗಿರುವ ಬಿ. ದೇವೇಂದ್ರಪ್ಪ ಅವರು ಕೇವಲ 874 ಮತಗಳಿಂದ ರಾಮಚಂದ್ರ ಅವರನ್ನು ಸೋಲಿಸಿದ್ದಾರೆ.

ಜಗಳೂರು ಕ್ಷೇತ್ರದಿಂದ ಗೆದ್ದ ಬಿ.ದೇವೇಂದ್ರಪ್ಪ ಅವರು ಜಿಲ್ಲೆಯ ಜಗಳೂರು ತಾಲೂಕಿನ ಚಿಕ್ಕಮ್ಮನಹಟ್ಟಿ ಗ್ರಾಮದಲ್ಲಿ ಜನಿಸಿದರು. ಬುಡಕಟ್ಟು ಕುಟುಂಬದಲ್ಲಿ ಜನಿಸಿದ ಅವರು ಮೂರು ದಶಕಗಳ ಕಾಲ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಜವಾನರಾಗಿ ಸೇವೆ ಸಲ್ಲಿಸಿದ್ದಾರೆ. ಇದೀಗ ಜಗಳೂರು ವಿಧಾನಸಭಾ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗುವ ಮೂಲಕ ಗಮನ ಸೆಳೆದಿದ್ದಾರೆ. ಸಾಕಷ್ಟು ಟಿಕೆಟ್​ ಆಕಾಂಕ್ಷಿಗಳ ನಡುವೆ ಕಾಂಗ್ರೆಸ್ ಟಿಕೆಟ್ ಗಿಟ್ಟಿಸಿಕೊಂಡು ಚುನಾವಣಾ ಅಖಾಡಕ್ಕಿಳಿದಿದ್ದ ದೇವೇಂದ್ರಪ್ಪ ಅವರು ಜಿದ್ದಾಜಿದ್ದಿನ ಹೋರಾಟದಲ್ಲಿ ಬಿಜೆಪಿ ಶಾಸಕ ಎಸ್ ವಿ ರಾಮಚಂದ್ರ ಅವರಿಗೆ ಸೋಲಿನ ರುಚಿ ತೋರಿಸಿದ್ದಾರೆ.

ಇದನ್ನೂ ಓದಿ :'ಸಿದ್ದರಾಮಯ್ಯ ಮತ್ತೊಮ್ಮೆ ಮುಖ್ಯಮಂತ್ರಿ ಆಗಲಿ'.. ವಿಶೇಷ ಪೂಜೆ ಸಲ್ಲಿಸಿದ ಕುರುಬ ಸಮುದಾಯ

ಖಾಸಗಿ ವಿದ್ಯಾಕೇಂದ್ರದಲ್ಲಿ ಡಿ ಗ್ರೂಪ್​​ ನೌಕರರಾಗಿ ಸೇವೆ :ಜಗಳೂರು ಪಟ್ಟಣದ ಅಮರಭಾರತಿ ವಿದ್ಯಾಕೇಂದ್ರದಲ್ಲಿ ಜಗಳೂರು ಕ್ಷೇತ್ರದಿಂದ ಗೆದ್ದಿರುವ ಬಿ ದೇವೇಂದ್ರಪ್ಪ ಅವರು ಡಿ.ಗ್ರೂಪ್ ನೌಕರರಾಗಿ ಮೂವತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಕಿತ್ತು ತಿನ್ನುವ ಬಡತನದ ನಡುವೆಯೂ ದೇವೇಂದ್ರಪ್ಪ ಅವರು ತಮ್ಮ ಇಬ್ಬರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿದ್ದಾರೆ. ಒಬ್ಬ ಕಿರಿಯ ಪುತ್ರ ಎಂಬಿಬಿಎಸ್ ಶಿಕ್ಷಣ ಪಡೆದು ವೈದ್ಯರಾಗಿ ತಾಲೂಕಿನ ಸೊಕ್ಕೆ ಹಾಗೂ ಬಿದರಕೆರೆ ಗ್ರಾಮಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಬಳಿಕ ಕೇಂದ್ರ ಲೋಕಾಸೇವಾ ಆಯೋಗದ ಪರೀಕ್ಷೆ ಬರೆದು ಐಆರ್​ಎಸ್ ಹುದ್ದೆಗೂ ಆಯ್ಕೆಯಾಗಿದ್ದಾರೆ. ಪ್ರಸ್ತುತ ಆದಾಯ ತೆರಿಗೆ ಇಲಾಖೆಯ ರಾಜ್ಯ ಆಯುಕ್ತರಾಗಿ ಇವರು ಸೇವೆ ಸಲ್ಲಿಸುತ್ತಿದ್ದಾರೆ.

ಬಿ ದೇವೇಂದ್ರಪ್ಪನವರು ಜವಾನರಾಗಿ ನಿವೃತ್ತಿ ಹೊಂದಿದ ಬಳಿಕ 2013ರಲ್ಲಿ ರಾಜಕೀಯಕ್ಕೆ ಪದಾರ್ಪಣೆ ಮಾಡಿದರು. ಈ ಮೊದಲು ಜಗಳೂರು ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲನ್ನು ಅನುಭವಿಸಿದ್ದರು. ಜೆಡಿಎಸ್​​ನಿಂದ ಸ್ಪರ್ಧೆ ಮಾಡಿ ಸೋತ ಬಳಿಕ ಕಾಂಗ್ರೆಸ್​ ಸೇರಿದ್ದ ದೇವೇಂದ್ರಪ್ಪನವರು ಇದೀಗ ಕಾಂಗ್ರೆಸ್​ನಿಂದ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ :135 ಸ್ಥಾನಗಳೇ ನನಗೆ ರಾಜ್ಯದ ಜನರು ನೀಡಿದ ಜನ್ಮದಿನದ ಬಹುದೊಡ್ಡ ಗಿಫ್ಟ್​: ಡಿ.ಕೆ.ಶಿವಕುಮಾರ್​

ABOUT THE AUTHOR

...view details