ದಾವಣಗೆರೆ:ಜಿಲ್ಲೆಯಲ್ಲಿ ಬಾಲಕನ ಮೇಲೆ ನಡೆದಿದೆ ಎನ್ನಲಾದ ಲೈಂಗಿಕ ದೌರ್ಜನ್ಯ ಪ್ರಕರಣವೊಂದು ಸಂಚಲನ ಮೂಡಿಸುತ್ತಿದೆ. ಚನ್ನಗಿರಿಯಲ್ಲಿ ಇಬ್ಬರು ಬಾಲಕರಿಂದ ಓರ್ವ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿರುವ ಪ್ರಕರಣ ಸಾಕಷ್ಟು ತಿರುವು ಪಡೆದುಕೊಳ್ಳುತ್ತಿದೆ. ಈ ಘಟನೆ ತಾಲೂಕಿನ ಪ್ರೌಢಶಾಲೆಯೊಂದರಲ್ಲಿ ಜುಲೈ 13 ರಂದು ನಡೆದಿದ್ದು, ಜೈಲೈ 14 ರಂದು ಬಾಲಕನ ಪೋಷಕರು ಪೊಲೀಸ್ ಠಾಣೆಯಲ್ಲಿ ದಾವೆ ಹೂಡಿದ್ದಾರೆ.
ಚನ್ನಗಿರಿ ಪೊಲೀಸ್ ಠಾಣೆ ಎದುರು ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ ಧರಣಿ ನಡೆಸಿದ್ದ ಸಂಬಂಧ ಪ್ರತಿಕ್ರಿಯಿಸಿದ ಎಸ್ಪಿ ಡಾ ಕೆ ಅರುಣ್, ತಾಲೂಕಿನ ಶಾಲೆಯೊಂದರಲ್ಲಿ ಬಾಲಕರಿಬ್ಬರಿಂದ ಬಾಲಕನಿಗೆ ಲೈಂಗಿಕ ಕಿರುಕುಳವಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ. ಮೂವರು ಮಕ್ಕಳನ್ನು ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಅಲ್ಲಿಂದ ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಬಾಲಕನ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯ ಬಗ್ಗೆ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆದರೆ, ಶಾಸಕರು ಈ ಘಟನೆ ಸುಳ್ಳು ಎಂದು ಹೇಳುತ್ತಿದ್ದಾರೆ. ಈಗಾಗಲೇ ಪ್ರಕರಣ ದಾಖಲಾಗಿದೆ. ಘಟನೆ ನಿಜವಿರಲಿ ಅಥವಾ ಸುಳ್ಳು ಇರಲಿ ತನಿಖೆ ನಡೆಸಿದ ನಂತರವೇ ಸತ್ಯಾಂಶ ಹೊರಬರಲಿದೆ ಎಂದರು.
ಈ ಪ್ರಕರಣ ಸಂಬಂಧ ಎಎಸ್ಪಿ ಬಸರಗಿ ನೇತ್ವತ್ವದಲ್ಲಿ ತಂಡ ರಚಿಸಲಾಗಿದೆ. ಸಿಸಿಟಿವಿ ಚೆಕ್ ಮಾಡಲು ಸೂಚಿಸಲಾಗಿದೆ. ತನಿಖೆಯಿಂದ ಸತ್ಯಾಂಶ ಗೊತ್ತಾಗುತ್ತದೆ. ಇದೇ ಕಾರಣಕ್ಕೆ ಎಫ್ಐಆರ್ ಸಹ ದಾಖಲು ಮಾಡಿ ಮೂರು ಅಪ್ರಾಪ್ತ ಬಾಲಕರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ವರದಿ ಬಂದ ಮೇಲೆ ನಿಜ ಹೊರಬಿಳಲಿದೆ. ಈ ವಿಚಾರವನ್ನು ಶಾಸಕರಿಗೆ ತಿಳಿಸಿದರೂ ಧರಣಿ ಮಾಡಿದ್ದಾರೆ ಎಂದು ಎಸ್ಪಿ ಹೇಳಿದರು.