ದಾವಣಗೆರೆ :ಮಹಾನಾಯಕ ಅಂಬೇಡ್ಕರ್ ಜನ್ಮದಿನಕ್ಕೆ ಈಗಲೇ ತಯಾರಿ ಆರಂಭವಾಗಿದೆ. ಅದರಂತೆ ಬೆಣ್ಣೆ ನಗರಿಯ ಯುವಕನೋರ್ವ ಶರ್ಟ್ ಬಟನ್ಗಳನ್ನ ಬಳಸಿ ಅಂಬೇಡ್ಕರ್ ಚಿತ್ರ ಬಿಡಿಸಿದ್ದಾನೆ. ಮಹಾಮಾನವತಾವಾದಿಯ ಜನ್ಮದಿನ್ಕಕೆ ಕೊಡುಗೆಯಾಗಿ ನೀಡಿದ್ದಾರೆ.
ದಾವಣಗೆರೆಯ ಭರತ್ ಕಾಲೋನಿಯ ಯುವಕ ಪ್ರದೀಪ್ ದೂದಾನಿ ಈ ವಿಭಿನ್ನ ಕಲೆಯ ಮೂಲಕ ಬೃಹತ್ ಕಲಾಕೃತಿ ರಚಿಸಿದ್ದಾರೆ. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಕಾಂ ಓದುತ್ತಿರುವ ಪ್ರದೀಪ್, ಇಂತಹ ಚಿತ್ರ ರಚನೆಯಿಂದಲೇ ಫೇಮಸ್ ಆಗಿದ್ದಾರೆ.
30 ಸಾವಿರ ಬಟನ್ನಲ್ಲಿ ಅರಳಿದ ಸಂವಿಧಾನ ಶಿಲ್ಪಿ ಸತತ ಮೂರು ದಿನಗಳ ಪರಿಶ್ರಮದ ಫಲವಾಗಿ ಇಲ್ಲಿನ ಶ್ರೀ ಸಿದ್ಧಗಂಗಾ ಶಾಲೆಯ ಆವರಣದಲ್ಲಿ ಅಂಬೇಡ್ಕರ್ ಚಿತ್ರ ಅರಳಿ ನಿಂತಿದೆ. ಇದಕ್ಕಾಗಿ ಬೆಂಗಳೂರಿನಿಂದ 30 ಸಾವಿರ ಬಟನ್ ತರಿಸಿಕೊಂಡು 5 ಅಡಿ ಅಗಲ ಹಾಗೂ 6 ಅಡಿ ಉದ್ದದ ಚಿತ್ರ ತಯಾರಿಸಿದ್ದಾರೆ.
ಅಷ್ಟೇ ಅಲ್ಲ, ಕಲಾವಿದ ಪ್ರದೀಪ್ ಇದಕ್ಕೂ ಮುನ್ನ ಹಲವು ಚಿತ್ರಗಳನ್ನ ಬಿಡಿಸಿ ಗಮನ ಸೆಳೆದಿದ್ದರು. ಕೋವಿಡ್ ವೇಳೆ ಕಾರ್ಮಿಕರಿಗೆ ನೆರವಾಗಿದ್ದ ನಟ ಸೋನು ಸೂದ್ ಚಿತ್ರವನ್ನು ದಾರದ ಸಹಾಯದಿಂದಲೂ ಬಿಡಿಸಿ ಹುಬ್ಬೇರುವಂತೆ ಮಾಡಿದ್ದರು. ಈ ಚಿತ್ರ ಗಮನಿಸಿದ್ದ ನಟ ಸೂದ್ ಕಲಾವಿದ ಪ್ರದೀಪ್ ಅವರನ್ನು ಮನೆಗೆ ಕರೆಸಿ ಬೆನ್ನು ತಟ್ಟಿದ್ದರು.
ಇಷ್ಟೊಂದು ಸಾಧನೆ ಮಾಡಿರೋ ಪ್ರದೀಪ್ ಇದ್ಯಾವುದಕ್ಕೂ ತರಬೇತಿ ಪಡೆದಿಲ್ಲವಂತೆ. ಕೇವಲ ಯೂಟ್ಯೂಬ್ನಲ್ಲಿ ನೋಡಿಕೊಂಡು ಮೊದಲು ಪ್ರಯತ್ನಿಸಿದ್ದರಂತೆ, ಆ ಬಳಿಕ ಈ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಇದೀಗ ಬಟನ್ಗಳನ್ನ ಬಳಸಿ ಸಂವಿಧಾನ ಶಿಲ್ಪಿಯನ್ನ ಚಿತ್ರಿಸಿದ್ದಾರೆ.