ದಾವಣಗೆರೆ:ಅಮರನಾಥ ಯಾತ್ರೆಗೆ ತೆರಳಿದ್ದ ಚನ್ನಗಿರಿಯ 08 ಜನ ಸುರಕ್ಷಿತವಾಗಿಗಿದ್ದಾರೆಂದು ಚನ್ನಗಿರಿ ಶಾಸಕ ಬಸವರಾಜ್ ವಿ ಶಿವಗಂಗಾ ಖಚಿತಪಡಿಸಿದ್ದಾರೆ. ಅಮರನಾಥದಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಭೂಕುಸಿತ ಸಂಭವಿಸುತ್ತಿರುವುದರಿಂದ ಸಾಕಷ್ಟು ಯಾತ್ರಾರ್ಥಿಗಳು ಆತಂಕದಲ್ಲಿದ್ದಾರೆ. ಈಗಾಗಲೇ ದಾವಣಗೆರೆ ನಗರದ ನಾಲ್ಕು ಜನ ಮಹಿಳೆಯರು ಹಿಂದಿರುಗಿದ್ದಾರೆ. ಜಿಲ್ಲೆಯ ಚನ್ನಗಿರಿಯ 08 ಜನ ಅಮರನಾಥ ಯಾತ್ರೆಗೆ ತೆರಳಿದ್ದರಿಂದ ಅವರ ಕುಟುಂಬದವರು ಆತಂಕದಲ್ಲಿ ಕಾಲ ಕಳೆಯುವ ಪರಿಸ್ಥಿತಿ ನಿರ್ಮಾಣ ಆಗಿತ್ತು.
ಈ ವೇಳೆ ಚನ್ನಗಿರಿ ಕ್ಷೇತ್ರದ ಶಾಸಕ ಬಸವರಾಜ್ ವಿ ಶಿವಗಂಗಾ ಅವರು ಅಧಿಕಾರಿಗಳನ್ನು ಸಂಪರ್ಕಿಸಿದ್ದು, ಕ್ಷೇತ್ರದಿಂದ ಈ ಬಾರಿ ಎಷ್ಟು ಮಂದಿ ಅಮರನಾಥ ಯಾತ್ರೆಗೆ ತೆರಳಿದ್ದಾರೆ ಎಂಬುದರ ಕುರಿತು ಮಾಹಿತಿ ಪಡೆದು ಅವರ ನೆರವಿಗೆ ಬಂದಿದ್ದಾರೆ. ಯಾತ್ರಾರ್ಥಿಗಳಿಗೆ ಫೋನ್ ಕರೆಯಿಂದ ಸಂಪರ್ಕಿಸುವ ಮೂಲಕ ಕ್ಷೇತ್ರದಿಂದ ಅಮರನಾಥ ಯಾತ್ರೆಗೆ ತೆರಳಿದ್ದವರನ್ನು ಸಂಪರ್ಕ ಮಾಡಿ ಅವರ ಯೋಗಕ್ಷೇಮ ವಿಚಾರಿಸಿದ್ದಾರೆ.
ಅಮರನಾಥ ಸೇರಿದಂತೆ ಉತ್ತರ ಭಾರತ ಪ್ರವಾಸದಲ್ಲಿರುವವರಿಗೆ ಶುಭ ಕೋರಿ ಯಾವುದೇ ಸಮಯದಲ್ಲಿ ನಿಮಗೆ ಸಣ್ಣ ಸಮಸ್ಯೆಯಾದರೂ ನನಗೆ ನೇರವಾಗಿ ಫೋನ್ ಕರೆ ಮಾಡಿ ಸಂಪರ್ಕಿಸಿ ಎಂದು ಧೈರ್ಯ ತುಂಬಿದ್ದಾರೆ. ಈಗಾಗಲೇ ಚನ್ನಗಿರಿ ತಾಲೂಕಿನನಿಂದ ಅಜ್ಜಿಹಳ್ಳಿಯ ಪ್ರಕಾಶ್, ವಸಂತ ಕುಮಾರ್ ರೇವಣ್ಣ, ಆದಿತ್ಯ, ಪ್ರಹ್ಲಾದ್, ನಲ್ಲೂರಿನ ಸತೀಶ್, ಚನ್ನಗಿರಿ ಪಟ್ಟಣದ ರಂಗಯ್ಯ, ತಿಪ್ಪಗೊಂಡನಹಳ್ಳಿಯಿಂದ ಮಂಜುನಾಥ್ ಡಿ ಎಂ, ಹಳ್ಳಿಹಾಳು(ಪೆನ್ನಸಮುದ್ರ) ಗ್ರಾಮದ ಜಿ ಎಸ್ ನಾಗರಾಜು ಅವರು ಇದೇ 7 ರಂದು ಶ್ರೀನಗರಕ್ಕೆ ಹೋಗಿ ಅಲ್ಲಿಂದ ಅಮರನಾಥಕ್ಕೆ ತೆರಳಿದ್ದರು.