ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ ಸುರಿಯುತ್ತಿದೆ. ಕೆಲವೆಡೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಸೋಮವಾರದಿಂದ ಸುರಿದ ಭಾರಿ ಮಳೆಗೆ ಇಂದು ಕೊಂಚ ಬ್ರೇಕ್ ಬಿದ್ದಿದೆ. ನಿನ್ನೆ ರಾತ್ರಿಯ ಬಳಿಕ ಮಳೆ ಕೊಂಚ ಕಡಿಮೆಯಾಗಿದ್ದರೂ, ಇಂದು ಭಾರಿ ಮಳೆ ಬೀಳುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ. ಜಿಲ್ಲೆಯಲ್ಲಿ ಶಾಲೆ, ಪ್ರೌಢಶಾಲೆ ಹಾಗೂ ಪಿಯು ತರಗತಿಗಳಿಗೆ ರಜೆ ನೀಡಲಾಗಿದೆ. ಮಳೆ ಪರಿಣಾಮವಾಗಿ ಮೃತಪಟ್ಟವರ ಸಂಖ್ಯೆ 4ಕ್ಕೆ ಏರಿಕೆಯಾಗಿದೆ. ಓರ್ವ ವ್ಯಕ್ತಿ ನೀರುಪಾಲಾಗಿದ್ದು, ಶೋಧ ಕಾರ್ಯ ನಡೆಯುತ್ತಿದೆ.
ಇಂದು ಬೆಳಗಿನ ಜಾವ ಬಂಟ್ವಾಳ ತಾಲೂಕಿನ ನಂದಾವರ ಎಂಬಲ್ಲಿ ಭೂಕುಸಿತ ಸಂಭವಿಸಿತು. ಮಣ್ಣು ಬಿದ್ದು ಮನೆ ಹಾನಿಗೊಳಗಾಗಿದೆ. ಮನೆಯೊಳಗೆ ಸಿಲುಕಿದ್ದವರ ಪೈಕಿ ಗಂಭೀರವಾಗಿ ಗಾಯಗೊಂಡ ಝರೀನಾ (49) ಎಂಬವರನ್ನು ರಕ್ಷಿಸಿ ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಅವರು ಸಾವನ್ನಪ್ಪಿದರು ಬಂಟ್ವಾಳ ತಹಶೀಲ್ದಾರ್ ಎಸ್.ಬಿ. ಕೂಡಲಗಿ ಮಾಹಿತಿ ನೀಡಿದ್ದಾರೆ.
ಸಂಪೂರ್ಣ ವಿವರ: ಬೆಳಗ್ಗೆ 6 ಗಂಟೆ ವೇಳೆಗೆ ಬಂಟ್ವಾಳ ತಾಲೂಕಿನ ಸಜಿಪಮುನ್ನೂರು ಗ್ರಾಮದ ನಂದಾವರ ಗುಂಪುಮನೆ ಎಂಬಲ್ಲಿ ವಾಸ್ತವ್ಯವಿರುವ ಮಹಮ್ಮದ್ ಎಂಬವರ ಮನೆ ಮೇಲೆ ಗುಡ್ಡ ಜರಿದುಬಿದ್ದಿದೆ. ಮಣ್ಣಿನಡಿ ಮಹಮ್ಮದ್, ಪತ್ನಿ ಝರೀನಾ ಮತ್ತು ಮಗಳು ಸಫಾ ಸಿಲುಕಿದ್ದರು. ಕೂಡಲೇ ಪಕ್ಕದ ಮನೆಯವರು ಸಂಬಂಧಪಟ್ಟವರಿಗೆ ತಿಳಿಸಿದ್ದು, ರಕ್ಷಣಾ ಕಾರ್ಯ ಕೈಗೊಳ್ಳಲಾಗಿತ್ತು.
ಸ್ಥಳಕ್ಕೆ ಎನ್.ಡಿ.ಆರ್.ಎಫ್, ಪೊಲೀಸ್, ಸಿ.ಆರ್.ಎಫ್, ಅಗ್ನಿಶಾಮಕ ತಂಡ ಆಗಮಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಆರೋಗ್ಯ ಇಲಾಖೆ ಸಿಬಂದಿ, ಆ್ಯಂಬುಲೆನ್ಸ್ ಜೊತೆಗೆ ಆಗಮಿಸಿ ಪೂರಕ ವ್ಯವಸ್ಥೆ ಕಲ್ಪಿಸಿದರು. ಬೆಳಗ್ಗೆ 8 ಗಂಟೆಯವರೆಗೆ ರಕ್ಷಣಾ ಕಾರ್ಯಾಚರಣೆ ನಡೆದಿದ್ದು, ಇವರಲ್ಲಿ ಮಹಮ್ಮದ್ ಮತ್ತು ಸಫಾ ಅವರನ್ನು ಸುರಕ್ಷಿತವಾಗಿ ಹೊರತರಲಾಗಿದೆ. ಆದರೆ ಝರೀನಾ ಮಣ್ಣಿನಡಿ ಸಿಲುಕಿದ್ದರು. ಅವರನ್ನೂ ಕೂಡ ಹೊರಕ್ಕೆ ತಂದು ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು. ಮಣ್ಣಿನಡಿ ಸಿಲುಕಿದ ವೇಳೆಯೇ ಪ್ರಾಣ ಹೋಗಿರಬಹುದು ಎಂದು ಹೇಳಲಾಗಿದೆ.