ಕರ್ನಾಟಕ

karnataka

ETV Bharat / state

ಧರ್ಮಸ್ಥಳಕ್ಕೂ ತಟ್ಟಿದ ನೀರಿನ ಬರ: ಕ್ಷೇತ್ರದ ಪ್ರವಾಸ ಮುಂದೂಡಲು ಭಕ್ತರಿಗೆ ಮನವಿ

ಧರ್ಮಸ್ಥಳದಲ್ಲಿ ನೀರಿನ ಅಭಾವ ತೀವ್ರವಾಗಿರುವುದರಿಂದ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು ಭಕ್ತಾದಿಗಳು ಹಾಗೂ ಪ್ರವಾಸಿಗರು ತಮ್ಮ ಪ್ರವಾಸವನ್ನು ಕೆಲ ದಿನಗಳ ಕಾಲ ಮುಂದೂಡುವಂತೆ ಕೋರಿದ್ದಾರೆ.

ಡಾ.ವೀರೇಂದ್ರ ಹೆಗ್ಗಡೆ

By

Published : May 18, 2019, 8:21 PM IST

ಮಂಗಳೂರು:ದಕ್ಷಿಣ ಕನ್ನಡ ಜಿಲ್ಲೆಯ ಜೀವನದಿ ನೇತ್ರಾವತಿ ಬರಿದಾಗಿದ್ದು, ಇದರಿಂದ ಜಿಲ್ಲೆಯಾದ್ಯಂತ ನೀರಿನ ಸಮಸ್ಯೆ ದಿನೇ ದಿನೇ ಉಲ್ಬಣಗೊಳ್ಳುತ್ತಿದೆ. ಈಗ ನೀರಿನ ಕೊರತೆಯು ಎಷ್ಟು ಹೆಚ್ಚಿದೆಯೆಂದರೆ ಇದರ ಬಿಸಿ ಈಗ ದೇವಾಲಯಗಳಿಗೂ ತಟ್ಟಿದೆ. ನೀರಿನ ಅಭಾವ ತೀವ್ರವಾಗಿರುವುದರಿಂದ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು ಭಕ್ತಾದಿಗಳು ಹಾಗೂ ಪ್ರವಾಸಿಗರು ತಮ್ಮ ಪ್ರವಾಸವನ್ನು ಕೆಲ ದಿನಗಳ ಕಾಲ ಮುಂದೂಡುವಂತೆ ಕೋರಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಜನತೆಯ ಪಾಲಿನ ಜೀವತಂತುವಾಗಿರುವ ನೇತ್ರಾವತಿಯು ಹಿಂದೆ ವರ್ಷವಿಡೀ ತುಂಬಿ ಹರಿಯುತ್ತಿರುತ್ತಿದ್ದಳು. ಆದರೆ ಮಾನವ ಪ್ರಕೃತಿ ನಾಶ ಮಾಡಿರುವ ಫಲವಾಗಿ ಇತ್ತೀಚಿನ ವರ್ಷಗಳಲ್ಲಿ ಆಕೆ ಬರಿದಾಗುತ್ತಿದ್ದಾಳೆ. ನೇತ್ರಾವತಿಯ ಪಾತ್ರವು ನೀರಿಲ್ಲದೆ ಬರಿದಾಗಿ ಒಣಗಿದಂತೆ ಆಗಿದೆ. ಮಾರ್ಚ್-ಮೇ ತಿಂಗಳಲ್ಲಿ ಸೂರ್ಯನ ತಾಪಮಾನ ಅಧಿಕವಾಗಿದ್ದು, ಭೂಮಿಯಲ್ಲಿ ನೀರಿನ ಅಂಶವೂ ಕಡಿಮೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ನೇತ್ರಾವತಿ ಬರಿದಾಗುತ್ತಿದ್ದಾಳೆ.

ಡಾ. ವೀರೇಂದ್ರ ಹೆಗ್ಗಡೆ

ಈ ಬಗ್ಗೆ ಧರ್ಮಸ್ಥಳ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಶ್ರೀಕ್ಷೇತ್ರದಲ್ಲಿ ನೀರಿನ ಅಭಾವ ತಲೆದೋರಿದ್ದು, ಧರ್ಮಸ್ಥಳಕ್ಕೆ ಬರುವವರು, ಇಲ್ಲಿಗೆ ಬರುವ ಸಮಯವನ್ನು ಮುಂದೂಡಬೇಕು. ಈಗ ಶಾಲೆಗೆ ರಜೆ ಇರುವ ಕಾರಣ ಎಲ್ಲರೂ ಕ್ಷೇತ್ರ ದರ್ಶನಕ್ಕೆ ಬರುವುದು ಸ್ವಾಭಾವಿಕ. ಅವರಿಗೂ ಬಿಸಿಲಿನ ಝಳಕ್ಕೆ ವಿಪರೀತ ತೊಂದರೆಯಾಗುತ್ತದೆ. ಆದ್ದರಿಂದ ನಾವು ಭಕ್ತರಿಗೆ ಕೊಡುವ ಸೇವೆಯಲ್ಲಿ ತೊಂದರೆಯಾಗಬಹುದು. ಆದ್ದರಿಂದ ಕ್ಷೇತ್ರ ದರ್ಶನವನ್ನು ಸಾಧ್ಯವಾದಷ್ಟು 15-20 ದಿನಗಳ ಕಾಲ ಮುಂದೂಡಿ ಎಂದು ನಾನು ಕೇಳಿಕೊಳ್ಳುತ್ತಿದ್ದೇನೆ. ಪರಿಸ್ಥಿತಿಯನ್ನು ಸುಧಾರಿಸಲು ಸಾಕಷ್ಟು ಪ್ರಯತ್ನ ನಾವು ಮಾಡುತ್ತಿದ್ದೇವೆ‌. ಆದರೆ ಪ್ರಕೃತಿಯನ್ನು ಮೀರಿ ನಿಲ್ಲಲು ಮನುಷ್ಯನಿಗೆ ಸಾಧ್ಯವಿಲ್ಲದ ಕಾರಣ ಈ ನಿರ್ಧಾರಕ್ಕೆ ಬಂದಿದ್ದೇವೆ ಎಂದು ಹೇಳಿದರು.

ಸರ್ಕಾರ ನೇತ್ರಾವತಿ ನದಿಗೆ ಅಡ್ಡಲಾಗಿ ಕಿಂಡಿ ಅಣೆಕಟ್ಟು ಕಟ್ಟಿರುವುದರಿಂದ ದೇವರ ಅಭಿಷೇಕಕ್ಕೆ ಅಲ್ಲಿನ ನೀರನ್ನು ಬಳಕೆ ಮಾಡಲಾಗುತ್ತದೆ. ತೀರ್ಥದ ಗುಂಡಿಯಲ್ಲಿ ನಾಲ್ಕು ಅಡಿ ನೀರು ಕಡಿಮೆ ಇದೆ. ಸದ್ಯದ ಮಟ್ಟಿಗೆ ದೇವರ ಅಭಿಷೇಕದ ನೀರಿಗೆ ಯಾವುದೇ ತೊಂದರೆ ಇಲ್ಲ. ಇದೇ ರೀತಿ 15 ದಿನಗಳೂ ಮುಂದುವರಿದರೆ ಭಗವಂತನಿಗೂ ಬಿಸಿ ತಟ್ಟಬಹುದು ಎಂದು ಹೇಳಿದರು.

ABOUT THE AUTHOR

...view details