ಕರ್ನಾಟಕ

karnataka

ETV Bharat / state

ಮಂಗಳೂರಿನಲ್ಲಿ ಈಜಲು ತೆರಳಿದ ಇಬ್ಬರು ಯುವಕರು ನೀರುಪಾಲು - ಮಂಗಳೂರು ಊರ್ವ ಪೊಲೀಸ್ ಠಾಣೆ

ಮಂಗಳೂರು ನಗರದ ಅಳಪೆ ಪಡ್ಪು ಬಳಿ ಈಜಲು ಹೋಗಿದ್ದ 6 ಮಂದಿ ಯುವಕರ ಪೈಕಿ ಇಬ್ಬರು ನೀರುಪಾಲಾದ ಘಟನೆ ಇಂದು (ಭಾನುವಾರ) ಸಂಜೆ ನಡೆದಿದೆ.

ಮಂಗಳೂರು
ಮಂಗಳೂರು

By

Published : Jul 30, 2023, 9:10 PM IST

ಮಂಗಳೂರು (ದಕ್ಷಿಣ ಕನ್ನಡ): ರಾಜ್ಯಾದ್ಯಂತ ಕಳೆದ ಎರಡ್ಮೂರು ವಾರಗಳಿಂದ ಎಡೆಬಿಡದೇ ಮಳೆ ಸುರಿಯುತ್ತಿದೆ. ಇದರ ಪರಿಣಾಮ ಹಳ್ಳ-ಕೊಳ್ಳ, ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿವೆ. ಜಲಪಾತಗಳು ಧುಮ್ಮಿಕ್ಕುತ್ತಿವೆ. ಅದರಲ್ಲೂ ಕರಾವಳಿ ಭಾಗದಲ್ಲಿ ಮಳೆಯ ಅಬ್ಬರ ಜೋರಾಗಿದೆ. ಕಣ್ಣು ಹಾಯಿಸಿದಲ್ಲೆಲ್ಲಾ ಜಲರಾಶಿ ಕಂಡುಬರುತ್ತಿದೆ. ಇದನ್ನು ಕಂಡು ಈಜಲು ಹೋದಾಗ ಕೆಲವೆಡೆ ದುರಂತಗಳು ಸಂಭವಿಸುತ್ತಿವೆ. ಜಿಲ್ಲೆಯಲ್ಲೂ ಭಾನುವಾರ ಇಂತಹದ್ದೇ ಘಟನೆ ವರದಿಯಾಗಿದೆ.

ಈಜಲು ಹೋಗಿದ್ದ 6 ಮಂದಿ ಯುವಕರ ಪೈಕಿ ಇಬ್ಬರು ನೀರುಪಾಲಾದ ಘಟನೆ ಭಾನುವಾರ ಸಂಜೆ ಅಳಪೆ ಪಡ್ಪು ಬಳಿ ನಡೆದಿದೆ. ನಗರದ ಅಳಪೆ ಸ್ಥಳೀಯ ನಿವಾಸಿಗಳಾದ ವರುಣ್ (26) ಮತ್ತು ವೀಕ್ಷಿತ್ (26) ನೀರುಪಾಲಾದವರು ಎಂದು ತಿಳಿದುಬಂದಿದೆ.

ಅಳಪೆಯ ಪಡ್ಪು ಬಳಿ ಇರುವ ನೀರು ತುಂಬಿರುವ ಕೆರೆಯಂತಿರುವ ಹೊಂಡದಲ್ಲಿ ವರುಣ್, ವೀಕ್ಷಿತ್ ಸೇರಿದಂತೆ ಆರು ಮಂದಿ ಯುವಕರು ತೆರಳಿದ್ದರು. ಇವರೆಲ್ಲ ನೀರಿಗಿಳಿದಿದ್ದರು. ಈ ಪೈಕಿ ಇಬ್ಬರು ನಾಪತ್ತೆಯಾಗಿದ್ದಾರೆ. ಅವರು ನೀರುಪಾಲಾಗಿದ್ದು, ಅವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಈಗಾಗಲೇ ಓರ್ವನ ಮೃತದೇಹ ಸಿಕ್ಕಿದ್ದು, ಇನ್ನೊಬ್ಬನಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಪೊಲೀಸರು ಮತ್ತು ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿದ್ದು, ಶೋಧ ಕಾರ್ಯ ನಡೆಸುತ್ತಿದೆ.

ಅಪಾರ್ಟ್​ಮೆಂಟ್​ನಿಂದ ಬಿದ್ದು ಮೆಡಿಕಲ್ ವಿದ್ಯಾರ್ಥಿ ಸಾವು: ಇನ್ನೊಂದೆಡೆ ನಗರದ ಕದ್ರಿ ಶಿವಭಾಗ್‌ನಲ್ಲಿರುವ ಅಪಾರ್ಟ್‌ಮೆಂಟ್‌ನ ಐದನೇ ಮಹಡಿಯಿಂದ ಜಾರಿ ಬಿದ್ದು ಮೆಡಿಕಲ್ ಕಾಲೇಜು ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿದ ಘಟನೆ ಇಂದು (ಭಾನುವಾರ) ಬೆಳಗ್ಗೆ ನಡೆದಿದೆ.

ಮೂಲತಃ ಅಡ್ಯಾರ್, ಪ್ರಸ್ತುತ ಕದ್ರಿ ಶಿವಭಾಗ್ ನಿವಾಸಿ ಸಮಯ್ (21) ಸಾವನ್ನಪ್ಪಿದ ಮೆಡಿಕಲ್ ವಿದ್ಯಾರ್ಥಿ ಎಂದು ತಿಳಿದುಬಂದಿದೆ. ಭಾನುವಾರ ಬೆಳಗ್ಗೆ ಶಿವಭಾಗ್ ಅಪಾರ್ಟ್‌ಮೆಂಟ್‌ನ ತಮ್ಮ ಫ್ಲ್ಯಾಟ್‌ನ ಬಾಲ್ಕನಿಯಲ್ಲಿ ಸಮಯ್ ಅವರು ಓದುತ್ತಿದ್ದಾಗ ಅವರ ತಾಯಿ ಕಾರು ತೊಳೆಯಲು ನೆಲಮಹಡಿಗೆ ಹೋಗೋಣ ಎಂದು ಹೇಳಿ ಹೋಗಿದ್ದರು.

ಈ ವೇಳೆ ಸಮಯ್ ಅವರು ಬಾತ್‌ರೂಂಗೆ ಹೋಗಿ ಬಂದು, ಬಳಿಕ ನೆಲಮಹಡಿಯ ಪಾರ್ಕಿಂಗ್ ಜಾಗದಲ್ಲಿರುವ ತನ್ನ ತಾಯಿ ಬಳಿ ಕಾರು ತೊಳೆಯಲು ಬಕೆಟ್ ಕೊಂಡು ಹೋಗಿದ್ದೀರಾ? ಎಂದು ಬಾಲ್ಕನಿಯಿಂದ ಕೇಳಿದ್ದಾರೆ. ಈ ಸಂದರ್ಭ ಮಳೆ ನೀರಿನ ಹನಿಯಿಂದ ಅವರು ಜಾರಿ ಕೆಳಗೆ ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೇ ಅವರು ಮೃತಪಟ್ಟಿದ್ದಾರೆ.

ಸಮಯ್ ಅವರ ತಂದೆ ಸಿವಿಲ್ ಇಂಜಿನಿಯರ್ ಆಗಿದ್ದು, ತಾಯಿ ಗೃಹಿಣಿಯಾಗಿದ್ದಾರೆ. ಈ ದಂಪತಿಯ ಇಬ್ಬರು ಗಂಡು ಮಕ್ಕಳಲ್ಲಿ ಸಮಯ್ ಹಿರಿಯವರಾಗಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಮಂಗಳೂರು: ಅಕ್ರಮವಾಗಿ ಪಿಸ್ತೂಲ್​ನೊಂದಿಗೆ ತಿರುಗಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ

ABOUT THE AUTHOR

...view details