ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಂಗಳೂರು : ಅಭ್ಯರ್ಥಿ ಆಯ್ಕೆ ಬಗ್ಗೆ ಪಾರ್ಲಿಮೆಂಟರಿ ಬೋರ್ಡ್ ನಿರ್ಧಾರ ಮಾಡಲಿದೆ. ಸದ್ಯ ಯಾವುದೇ ನಿರ್ಧಾರ ಆಗಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದರು.
ಮಂಗಳೂರಿನಲ್ಲಿ ಮಾತನಾಡಿದ ಅವರು, ಚುನಾವಣಾ ಪ್ರಚಾರಕ್ಕೆ ರಾಷ್ಟ್ರೀಯ ನಾಯಕರು, ಇತರ ರಾಜ್ಯಗಳ ಮುಖ್ಯಮಂತ್ರಿಗಳು, ಕೇಂದ್ರದ ಸಚಿವರುಗಳು ಪ್ರಚಾರಕ್ಕೆ ಬರಲಿದ್ದಾರೆ. ಮೂರು ಹಂತದ ಚುನಾವಣಾ ಪ್ರಚಾರ ತಂತ್ರಗಾರಿಕೆ ಮಾಡುತ್ತೇವೆ. ಸಾರ್ವಜನಿಕ ಸಭೆಗಳು, ರೋಡ್ ಶೋ ಗಳು, ಮನೆ ಮನೆ ಪ್ರಚಾರ ಮಾಡಲಿದ್ದೇವೆ ಎಂದರು.
ಚುನಾವಣಾ ಪೂರ್ವ ತಯಾರಿಯನ್ನು ಪಕ್ಷ ಮಾಡಿಕೊಂಡಿದೆ: ಅಭ್ಯರ್ಥಿಗಳ ಬದಲಾವಣೆಗೆ ರಾಜ್ಯದ ಕೆಲವು ಭಾಗಗಳಲ್ಲಿ ಚರ್ಚೆಗಳು ನಡೆಯುತ್ತಿವೆ. ಈ ಕುರಿತು ಪಾರ್ಲಿಮೆಂಟರಿ ಬೋರ್ಡ್ ನಿರ್ಧಾರ ಕೈಗೊಳ್ಳುತ್ತೆ ಎಂದರು. ಚುನಾವಣಾ ಘೋಷಣೆಯ ಚುನಾವಣಾ ಆಯೋಗದ ನಿರ್ಧಾರವನ್ನು ಬಿಜೆಪಿ ಸ್ವಾಗತಿಸುತ್ತದೆ. ಚುನಾವಣಾ ಪೂರ್ವ ತಯಾರಿಯನ್ನು ಪಕ್ಷ ಮಾಡಿಕೊಂಡಿದೆ ಎಂದರು.
ಸಾರ್ವಜನಿಕ ಸಭೆ, ಯಾತ್ರೆಗಳು, ಮನೆ ಮನೆ ಭೇಟಿ, ಬೂತ್ ಅಭಿಯಾನ, ವಿಜಯ ಸಂಕಲ್ಪ ಅಭಿಯಾನ, ವಿಜಯ ಸಂಕಲ್ಪ ಯಾತ್ರೆ ಮುಗಿಸಿದ್ದೇವೆ. ಅಭ್ಯರ್ಥಿಗಳ ಪಟ್ಟಿಯನ್ನು ಪಕ್ಷ ರಾಷ್ಟ್ರೀಯ ಪಾರ್ಲಿಮೆಂಟರಿ ಬೋರ್ಡ್ ಘೋಷಣೆ ಕೆಲವೇ ದಿನಗಳಲ್ಲಿ ಮಾಡಲಿದೆ. ಈ ಬಾರಿಯ ಚುನಾವಣೆಯಲ್ಲಿ ಅಭೂತಪೂರ್ವ ಯಶಸ್ಸು ಪಡೆಯುತ್ತೇವೆ. ಬಹುಮತ ಪಡೆಯುತ್ತೇವೆ ಎಂದರು.
ಚುನಾವಣೆ ಘೋಷಣೆ ಆದ ಬಳಿಕ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: ಯಡಿಯೂರಪ್ಪ ಹಾಗು ಬೊಮ್ಮಾಯಿ ಅವರ ನೇತೃತ್ವದಲ್ಲಿ ಈ ಚುನಾವಣೆ ನಡೆಯಲಿದೆ. ಈ ಹಿಂದಿನಿಂದಲೂ ನಮ್ಮ ನೀತಿ ಇದೆ. ಚುನಾವಣೆ ಘೋಷಣೆ ಆದ ಬಳಿಕ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಆಗುತ್ತದೆ. ಈ ಬಾರಿಯೂ ಅದೇ ಪ್ರಕ್ರಿಯೆಯಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಆಗುತ್ತದೆ ಎಂದು ಹೇಳಿದರು.
ಒಳ ಮೀಸಲಾತಿ ವಿಚಾರದಲ್ಲಿ ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಮುಖ್ಯಮಂತ್ರಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಎಲ್ಲಾ ಸಮುದಾಯಕ್ಕೂ ನ್ಯಾಯ ಒದಗಿಸುವ ಕೆಲಸ ಮಾಡಿದ್ದಾರೆ. ಎಲ್ಲರೂ ಸಮಾಧಾನದಿಂದ ಇದ್ದಾರೆ. ಯಾರು ನೋವಿನಲ್ಲಿ ಇಲ್ಲ. ಆದರೆ ಕಾಂಗ್ರೆಸ್ ಇದರಲ್ಲಿ ರಾಜಕಾರಣ ಮಾಡುತ್ತಿದೆ ಎಂದರು.
ವಿಶೇಷ ಚೇತನರಿಗೆ ಮನೆಯಿಂದಲೇ ಮತಚಲಾಯಿಸಲು ಅವಕಾಶ:ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ 80 ವರ್ಷ ದಾಟಿದ 4,482 ಮಂದಿ ಮತದಾರರಿದ್ದು, ಅವರಿಗೆ ಮನೆಯಿಂದಲೇ ಮತದಾನ ಚಲಾಯಿಸಲು ಅಗತ್ಯ ಸಿದ್ಧತೆ ನಡೆಸಲಾಗುತ್ತಿದೆ. ಇದರೊಂದಿಗೆ ಕೋವಿಡ್ ಪಾಸಿಟಿವ್ ಆದವರು ಮತ್ತು ಅಂಗವಿಕಲರಿಗೂ ಮನೆಯಿಂದಲೇ ಮತ ಚಲಾಯಿಸಲು ಅವಕಾಶ ನೀಡಲಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿ ಹಾಗೂ ಪುತ್ತೂರು ಉಪ ವಿಭಾಗದ ಸಹಾಯಕ ಆಯುಕ್ತ ಗಿರೀಶ್ ನಂದನ್ ತಿಳಿಸಿದ್ದಾರೆ.
ಪುತ್ತೂರು ಉಪ ವಿಭಾಗದ ಸಹಾಯಕ ಆಯುಕ್ತ ಗಿರೀಶ್ ನಂದನ್ ಮನೆಗೆ ಬ್ಯಾಲೆಟ್ ಪೇಪರ್ ತಲುಪಿಸಲಾಗುತ್ತದೆ: ಅವರು ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪುತ್ತೂರು ತಾಲೂಕು ಕಚೇರಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಧ್ಯಮಗಳಿಗೆ ಮಾಹಿತಿ ನೀಡಿದರು. ಬೂತ್ ಮಟ್ಟದ ಮತಗಟ್ಟೆ ಅಧಿಕಾರಿಗಳ ಮೂಲಕ 12ಡಿ ಫಾರಂ ಅನ್ನು ಈ ಮತದಾರರ ಮನೆಗೆ ತಲುಪಿಸಲಾಗುವುದು. ಅವರು ಅದಕ್ಕೆ ಸಹಿ ಹಾಕಿದಲ್ಲಿ ಅವರಿಗೆ ಚುನಾವಣೆಯ ಕೆಲ ದಿನದ ಮೊದಲು ಮನೆಗೆ ಬ್ಯಾಲೆಟ್ ಪೇಪರ್ ತಲುಪಿಸಲಾಗುತ್ತದೆ. ಸಹಿ ಹಾಕದೆ ಫಾರಂ ನೀಡಿದಲ್ಲಿ ಅವರು ಮತಗಟ್ಟೆಗೆ ಬಂದು ಮತ ಚಲಾಯಿಸುತ್ತಾರೆ ಎಂದು ನಿರ್ಧರಿಸಲಾಗುತ್ತದೆ.
ಫಾರಂ ಸಹಿ ಹಾಕಿದ್ದಲ್ಲಿ ಅಂತಹವರು ಹೆಸರನ್ನು ಮತಗಟ್ಟೆಯ ಪಟ್ಟಿಯಲ್ಲಿ ಪೋಸ್ಟ್ ಬ್ಯಾಲೆಟ್(ಪಿಬಿ) ಎಂದು ಪರಿಗಣಿಸಿ ಅವರು ಬ್ಯಾಲೆಟ್ ಮತಪತ್ರದಲ್ಲಿ ಮತ ಚಲಾಯಿಸಲಿದ್ದಾರೆ. 13 ಮಾದರಿ ಮತಗಟ್ಟೆ ಪುತ್ತೂರು ವಿಧಾನಸಭಾ ಕ್ಷೇತ್ರದ 13 ಮತಗಟ್ಟೆಗಳನ್ನು ಮಾದರಿ ಮತಗಟ್ಟೆಗಳನ್ನಾಗಿ ರೂಪಿಸಲಾಗುತ್ತಿದೆ ಎಂದರು.
ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಕೇರಳ ಕರ್ನಾಟಕ ಗಡಿ ಪ್ರದೇಶವಾದ ಸಾರಡ್ಕ, ಉಕ್ಕುಡ, ಪಾಣಾಜೆ, ಮೇನಾಲದಲ್ಲಿ ಚೆಕ್‍ಪೋಸ್ಟ್ ತೆರೆಯಲಾಗಿದ್ದು, ಅಲ್ಲಿ ಚುನಾವಣಾ ಅಧಿಕಾರಿಗಳ ಸಹಿತ ಪೊಲೀಸರು ಸೇರಿದಂತೆ ನಾಲ್ಕು ಮಂದಿ ಕರ್ತವ್ಯ ನಿರ್ವಹಿಸಲಿದ್ದಾರೆ. ಚುನಾವಣೆಗೆ ಸಂಬಂಧಿಸಿ ಮಾಹಿತಿಗಾಗಿ ದೂರವಾಣಿ 08251-230357 ಕಂಟ್ರೋಲ್ ರೂಂ ತೆರೆಯಲಾಗಿದ್ದು, ದಿನದ 24 ಗಂಟೆ ಇದನ್ನು ಸಂಪರ್ಕಿಸಬಹುದು. ಫ್ಲೈಯಿಂಗ್ ಸ್ಕ್ವಾಡ್ ರಚಿಸಲಾಗಿದ್ದು, 3 ಜನರ ಎರಡು ತಂಡಗಳು ನಿರಂತರ ಸಂಚಾರದಲ್ಲಿ ಇರಲಿದೆ. ಚುನಾವಣೆಗೆ ಸಂಬಂಧಿಸಿ ದೂರುಗಳಿದ್ದಲ್ಲಿ ಸಿವಿಜಿಲ್ ಆ್ಯಪ್ ಮೂಲಕ ಸಲ್ಲಿಸಲು ಅವಕಾಶ ಇದೆ ಎಂದರು.
ಮೆಡಿಕಲ್ ಕಾಲೇಜು ನಿರ್ಮಾಣ ಚಿಂತನೆಯ ಹಿಂದೆ ಶಾಸಕರ ಪಾತ್ರ ಮಹತ್ವದ್ದು- ಆರ್ ಸಿ ನಾರಾಯಣ :ಪುತ್ತೂರಿನ ಜನತೆಯ ಮುಖ್ಯ ಬೇಡಿಕೆಯಾದ ಮೆಡಿಕಲ್ ಕಾಲೇಜಿಗೆ ಪೂರಕವಾದ ವ್ಯವಸ್ಥೆಯನ್ನು ಜೋಡಿಸಿರುವುದು ಭಾರತೀಯ ಜನತಾ ಪಾರ್ಟಿ. ಕಾಲೇಜು ನಿರ್ಮಾಣದ ಚಿಂತನೆಯ ಹಿಂದೆ ಪುತ್ತೂರು ಶಾಸಕರ ಪಾತ್ರ ಮಹತ್ತರವಾಗಿದೆ ಎಂದು ಬಿಜೆಪಿ ಜಿಲ್ಲಾ ಓಬಿಸಿ ಮೋರ್ಚಾದ ಆರ್ ಸಿ ನಾರಾಯಣ ಹೇಳಿದರು.
ಬಿಜೆಪಿ ಜಿಲ್ಲಾ ಓಬಿಸಿ ಮೋರ್ಚಾದ ಆರ್ ಸಿ ನಾರಾಯಣ ಬುಧವಾರ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾಲೇಜು ನಿರ್ಮಾಣಕ್ಕೆ ಏನೆಲ್ಲಾ ಪೂರ್ವ ತಯಾರಿ ಬೇಕಾಗಿದೆ ಅದನ್ನು ಈಗಾಗಲೇ ಶಾಸಕರ ನೇತೃತ್ವದಲ್ಲಿ ಮಾಡಲಾಗಿದೆ. ಈಗಾಗಲೇ ಪುತ್ತೂರು ಸರಕಾರಿ ಆಸ್ಪತ್ರೆಗೆ 5.1 ಎಕ್ರೆ ವಿಸ್ತೀರ್ಣ ಹೊಂದಿದ್ದು, ಪಕ್ಕದ ಸಬ್ ರಿಜಿಸ್ಟ್ರಾರ್ ಕಚೇರಿ ಜಾಗ, ಲೋಕೋಪಯೋಗಿ ಇಲಾಖೆ ಜಾಗದ ಸೇರಿದಂತೆ ಸರಕಾರಿ ಆಸ್ಪತ್ರೆಗೆ ಶಾಸಕರ ನೇತೃತ್ವದಲ್ಲಿ ಮೀಸಲಿಡಲಾಗಿದೆ. ಮುಂದೆ 300 ಬೆಡ್ ಆಸ್ಪತ್ರೆಯಾಗಿ ಶೀಘ್ರ ಮೇಲ್ದರ್ಜೆಗೇರಲು ಪೂರ್ವ ತಯಾರಿ ನಡೆಸಲಾಗಿದೆ. ಇದಕ್ಕೆ ಪೂರಕ ಎಂಬಂತೆ ಪುತ್ತೂರು ಸರಕಾರಿ ಆಸ್ಪತ್ರೆಗೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮೂಲಕ 12 ಡಯಾಲಿಸಿಸ್ ನ್ನು ಶಾಸಕರು ಒದಗಿಸಿದ್ದಾರೆ ಎಂದು ವಿವರಿಸಿದರು.
ಉಪ್ಪಿನಂಗಡಿ, ವಿಟ್ಲ ಪಾಣಾಜೆಗೆ ಸಮುದಾಯ ಆರೋಗ್ಯ ಕೇಂದ್ರವನ್ನು ತರುವಲ್ಲಿ ಸಫಲರಾಗಿದ್ದು, ಈಗಾಗಲೇ ಪಾಣಾಜೆಯಲ್ಲಿ 12.4 ಕೋಟಿ ವೆಚ್ಚದ ವಿಸ್ತೃತ ಕಟ್ಟಡ ನಿರ್ಮಾಣ ಆಗಲಿದೆ. ಉಪ್ಪಿನಂಗಡಿ ಆರೋಗ್ಯ ಸಮುದಾಯ ಕೇಂದ್ರಕ್ಕೆ 75 ಲಕ್ಷ ರೂ. ವಿಟ್ಲಕ್ಕೆ 47 ಲಕ್ಷ ರೂ. ಅನುದಾನ ಇಡಲಾಗಿದೆ. ಅಲ್ಲದೆ ವಿವಿಧೆಡೆ ಆರೋಗ್ಯ ಕೇಂದ್ರಗಳಿಗೆ ಸ್ವಚ್ಛತೆ ಇನ್ನಿತರ ಸೇರಿದಂತೆ ಅಭಿವೃದ್ಧಿಗೆ 17 ಲಕ್ಷ ರೂ. ನೀಡಲಾಗಿದೆ ಎಂದು ತಿಳಿಸಿದ ಅವರು, ಒಟ್ಟಾರೆಯಾಗಿ ನೂರಕ್ಕೆ ನೂರು ಶೇಕಡಾ ಪುತ್ತೂರು ಆಸ್ಪತ್ರೆಯನ್ನು ಸುಸಜ್ಜಿತವಾಗಿರಿಸಿದ್ದು ಮಂಗಳೂರು ವೆನ್ಲಾಕ್ ಆಸ್ಪತ್ರೆಯನ್ನು ಬಿಟ್ಟರೆ ಪುತ್ತೂರಿನ ಆಸ್ಪತ್ರೆ ಎಂದು ಅವರು ಹೇಳಿದರು.
ಇದನ್ನೂ ಓದಿ :ಕಳೆದ ಮೂರು ತಿಂಗಳಿಂದ ಆಪರೇಷನ್ ಹಸ್ತಕ್ಕೆ ಯತ್ನ : ಸಚಿವ ಮುನಿರತ್ನ ಗಂಭೀರ ಆರೋಪ