ಸುಬ್ರಹ್ಮಣ್ಯ :ಕುಕ್ಕೆ ಸುಬ್ರಹ್ಮಣ್ಯದಲ್ಲಿರುವ ಪದವಿಪೂರ್ವ ಕಾಲೇಜಿನಲ್ಲಿ ಹೈಸ್ಕೂಲ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಲೈಂಗಿಕ ದೌರ್ಜನ್ಯ ಆರೋಪಿ ಶಿಕ್ಷಕನ ವಿರುದ್ಧ ಕಾಲೇಜು ವಠಾರದಲ್ಲಿ ಸಾರ್ವಜನಿಕರು ಹಾಗೂ ಹಿರಿಯ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.
ಲೈಂಗಿಕ ದೌರ್ಜನ್ಯ ಆರೋಪಿ ಶಿಕ್ಷಕನನ್ನು ಕೂಡಲೇ ಕೆಲಸದಿಂದ ತೆಗೆಯಬೇಕು ಮತ್ತು ಜಾಮೀನನ್ನು ವಜಾ ಮಾಡಬೇಕು ಮತ್ತು ಆತ ಯಾವುದೇ ಕಾರಣಕ್ಕೂ ಶಾಲಾ ಕಾಂಪೌಂಡ್ ಒಳಗಡೆ ಬರಬಾರದು ಹಾಗೂ ಆತನ ಮೊದಲನೇ ಮದುವೆಯಾದಲ್ಲಿಂದಲೇ ಸಮಗ್ರ ತನಿಖೆ ನಡೆಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
ಲೈಂಗಿಕ ದೌರ್ಜನ್ಯ ಆರೋಪಿ ಶಿಕ್ಷಕನ ವಿರುದ್ಧ ಪ್ರತಿಭಟನೆ ಕೆಲ ದಿನಗಳ ಹಿಂದೆ ಆರೋಪಿ ಶಿಕ್ಷಕ ವಿದ್ಯಾರ್ಥಿನಿಯೊಬ್ಬಳನ್ನು ಪ್ರಾಜೆಕ್ಟ್ ಕೆಲಸ ಹಾಗೂ ಟ್ಯೂಷನ್ ನೆಪದಲ್ಲಿ ಮನೆಗೆ ಕರೆಸಿ ಲೈಂಗಿಕ ಕಿರುಕುಳ ಹಾಗೂ ದೌರ್ಜನ್ಯ ಮಾಡಿದ ಬಗ್ಗೆ ವಿದ್ಯಾರ್ಥಿನಿಯ ತಾಯಿಯು ಸುಬ್ರಹ್ಮಣ್ಯ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಹಿನ್ನೆಲೆ ಪೊಲೀಸರು ಆರೋಪಿ ಶಿಕ್ಷಕನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು.
ಆರೋಪಿ ಗುರುರಾಜ್ ವಿರುದ್ಧ ಪೋಕ್ಸೊ ಕಾಯ್ದೆ ಅನ್ವಯ ಅಪ್ರಾಪ್ತೆ ಮೇಲೆ ಲೈಂಗಿಕ ಕಿರುಕುಳ ಹಾಗೂ ದೌರ್ಜನ್ಯ ನಡೆಸಿದ ಬಗ್ಗೆ ಕೇಸು ದಾಖಲಾಗಿತ್ತು. ಆರೋಪಿ ಶಿಕ್ಷಕ ಮೊದಲ ಪತ್ನಿ ಮೃತಪಟ್ಟಿದ್ದು, ಈತ 2ನೇ ಮದುವೆಯಾಗಿದ್ದಾನೆ ಎನ್ನಲಾಗಿದೆ.
ಹೀಗಾಗಿ, ಮೊದಲನೇ ಪತ್ನಿ ಮೃತಪಟ್ಟಲ್ಲಿಂದಲೇ ತನಿಖೆಯಾಗಬೇಕು, ಮಾತ್ರವಲ್ಲದೆ ಈತನಿಗೆ ಬೆಂಬಲ ನೀಡುವ ಇನ್ನೂ ಕೆಲವು ಜನರಿದ್ದಾರೆ. ಈ ಬಗ್ಗೆಯೂ ತನಿಖೆಯಾಗಬೇಕು ಎಂದು ಪ್ರತಿಭಟನಾನಿರತರು ಒತ್ತಾಯಿಸಿದ್ದಾರೆ.