ಪುತ್ತೂರು: ದಿನನಿತ್ಯ ನೂರಾರು ಜನ ನಡೆದು ಹೋಗುವ 70 ವರ್ಷಕ್ಕಿಂತ ಅಧಿಕ ಹಳೆಯದಾದ ಕಿಂಡಿ ಅಣೆಕಟ್ಟು ದುರಸ್ತಿ ಕಾಣದೆ ಅಪಾಯದ ಸ್ಥಿತಿಯಲ್ಲಿದೆ. ಸ್ಥಳೀಯರು ಇದೀಗ ಈ ಕಿಂಡಿ ಅಣೆಕಟ್ಟಿನಿಂದ ಸುಮಾರು ನೂರು ಮೀಟರ್ ದೂರದಲ್ಲಿ ಬೇರೊಂದು ಸಂಪರ್ಕ ದಾರಿ ನಿರ್ಮಿಸಿಕೊಂಡಿದ್ದು, ಸದ್ಯ ನೂತನ ಮತ್ತು ಶಾಶ್ವತ ಸೇತುವೆಯ ಬೇಡಿಕೆಯಿಟ್ಟಿದ್ದಾರೆ.
ಚಿಕ್ಕಮುಡ್ನೂರು ಗ್ರಾಮದ ಅಂದ್ರಟ್ಟ ಎಂಬಲ್ಲಿ ಕೋಟಿಕಟ್ಟ ಎಂಬ ಹೆಸರಿನ ಹಳೆಯ ಕಿಂಡಿ ಅಣೆಕಟ್ಟು ರಕ್ಷಣಾ ಬೇಲಿಯಿಲ್ಲದೆ ಅಪಾಯದ ಸ್ಥಿತಿಯಲ್ಲಿದೆ. ಈ ಮಳೆಗಾಲದಲ್ಲಿ ಕೊಚ್ಚಿ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕಿಂಡಿ ಅಣೆಕಟ್ಟಿನ ದುರಸ್ತಿ ಸಹಿತ ರಕ್ಷಣಾ ಬೇಲಿ ನಿರ್ಮಿಸುವುದು ಸ್ಥಳೀಯರ ಬಹುಕಾಲದ ಬೇಡಿಕೆಯಾಗಿದೆ. ಬೇಡಿಕೆ ಈಡೇರುವುದಿಲ್ಲ ಎಂಬುದನ್ನು ಅರಿತ ಸ್ಥಳೀಯರು ಸ್ಥಳೀಯರೊಬ್ಬರ ಒಪ್ಪಿಗೆಯಂತೆ ಗದ್ದೆಯನ್ನು ಕಡಿದು ಒಳಗಿನಿಂದ ಪರ್ಯಾಯ ರಸ್ತೆ ನಿರ್ಮಿಸಿದ್ದಾರೆ.
ಅಂದ್ರಟ್ಟದಿಂದ ಕೂಡುರಸ್ತೆ, ಆನಡ್ಕ, ಶಾಂತಿಗೋಡು, ಬೊಳಿಂಜ, ದಾಸರಮೂಲೆ ಪುರುಷರಕಟ್ಟೆ ಪ್ರದೇಶವನ್ನು ಸಂಪರ್ಕಿಸುವ ಈ ಕಿಂಡಿ ಅಣೆಕಟ್ಟಿನಲ್ಲಿ ನೂರಾರು ವಿದ್ಯಾರ್ಥಿಗಳು ಆನಡ್ಕ, ಶಾಂತಿಗೋಡು ಪ್ರದೇಶದಿಂದ ಅಣೆಕಟ್ಟಿನ ಈ ಭಾಗದ ಜಿಡೆಕಲ್ಲು ಶಾಲಾ-ಕಾಲೇಜಿಗೆ ಬರುತ್ತಾರೆ. ಆದರೆ ಇದು ಮಳೆಗಾಲದಲ್ಲಿ ಸುರಕ್ಷಿತವಲ್ಲ.ಕಳೆದ ಮಳೆಗಾಲದಲ್ಲಿ ರಕ್ಷಣಾ ಬೇಲಿ ಇಲ್ಲದ ಈ ಕಿಂಡಿ ಅಣೆಕಟ್ಟಿನಲ್ಲಿ ನಡೆದು ಹೋಗುತ್ತಿದ್ದ ಕಾರ್ಮಿಕರೊಬ್ಬರು ಅಕಸ್ಮಾತ್ ಆಗಿ ನೀರಿಗೆ ಬಿದ್ದು ಕೊಚ್ಚಿಕೊಂಡು ಹೋಗಿ ಪ್ರಾಣ ಕಳೆದುಕೊಂಡ ದುರ್ಘಟನೆ ಸಹ ಜರುಗಿದೆ.