ಮಂಗಳೂರು: ಕನ್ನಡದಲ್ಲಿ ಈ ವರ್ಷ ಹಿಂದಿಗಿಂತ ಅಧಿಕ ಚಲನಚಿತ್ರ ನಿರ್ಮಾಣವಾಗಿದೆ. ಇದಕ್ಕೆ ಎದೆಯುಬ್ಬಿಸಿ ಮೆರೆಯಬೇಕೋ ಅಥವಾ ಆತಂಕ ಪಡಬೇಕೋ ಗೊತ್ತಿಲ್ಲ. ಇದರಿಂದ ಬೆಳೆಗಿಂತ ಕಳೆ ವೇಗವಾಗಿ ಬರುವ ಅಪಾಯವಿದೆ ಎಂದು ಕನ್ನಡ ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಆತಂಕ ವ್ಯಕ್ತಡಿಸಿದರು.
ಕನ್ನಡ ಸಿನಿಮಾ ನಿರ್ಮಾಣದಲ್ಲಿ ಬೆಳೆಗಿಂತ ಕಳೆಯೇ ಅಧಿಕವಿದೆ: ನಾಗತಿಹಳ್ಳಿ ಚಂದ್ರಶೇಖರ್ ನಗರದ ಮಿನಿ ವಿಧಾನಸೌಧದ ಬಳಿಯಿರುವ ಸರ್ಕಾರಿ ನೌಕರರ ಸಂಘದ ಸಭಾಭವನದಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಈಗ ವಾರಕ್ಕೆ ನಾಲ್ಕರಿಂದ ಐದು ಚಲನಚಿತ್ರಗಳು ನಿರ್ಮಾಣವಾಗುತ್ತದೆ. ಕೆಲವೊಂದರ ಹೆಸರೇ ಗೊತ್ತಿರುವುದಿಲ್ಲ. ಮೊದಲ ದಿನವೇ ಚಲನಚಿತ್ರ ಮಂದಿರದಿಂದ ಹೊರಬೀಳುವ ಚಿತ್ರಗಳಿವೆ. ದುರಂತ ಎಂದರೆ ಕನ್ನಡದ ಹಾದಿಯಲ್ಲಿ ತುಳು ಕೂಡ ಹೆಚ್ಚು ಚಲನಚಿತ್ರಗಳನ್ನು ನಿರ್ಮಾಣ ಮಾಡುತ್ತಿವೆ ಎಂದು ನಾಗತಿಹಳ್ಳಿ ಚಂದ್ರಶೇಖರ್ ಖೇದ ವ್ಯಕ್ತಪಡಿಸಿದರು.
ತಮ್ಮ ಇಂಡಿಯಾ v/s ಇಂಗ್ಲೆಂಡ್ ಹೊಸ ಚಲನಚಿತ್ರದ ಬಗ್ಗೆ ಮಾತನಾಡಿ, ಈ ಚಲನಚಿತ್ರ ನನ್ನ ಮಗಳು ಬರೆದ attitude & longitude ಕಾದಂಬರಿ ಆಧಾರಿತವಾಗಿದ್ದು, ಬ್ರಿಟಿಷರು ಸುಮಾರು 250 ವರ್ಷಗಳ ಕಾಲ ನಮ್ಮನ್ನು ಆಳ್ವಿಕೆ ಮಾಡಿದ್ದರು. ಅದರ ಮರುರೂಪವನ್ನು ಈ ಚಲನಚಿತ್ರದಲ್ಲಿ ತೋರಿಸಲಾಗಿದೆ. ಸಿನಿಮಾದ ಬಹುಭಾಗವನ್ನು ಇಂಗ್ಲೆಂಡ್ನಲ್ಲಿ ಚಿತ್ರೀಕರಣ ಮಾಡಲಾಗಿದೆ. ವಸಾಹತುಶಾಹಿ ಕಾಲದಿಂದ ಭಾರತಕ್ಕೆ ಆದ ಸಾಧಕ-ಬಾಧಕಗಳೇನು ಎಂಬ ಚರ್ಚೆಯನ್ನು, ಚರಿತ್ರೆಯನ್ನು ಪುನರ್ ಭೇಟಿಯಾಗುವ ಕಥಾವಸ್ತುವನ್ನು ಇರಿಸಿ ಈ ಚಲನಚಿತ್ರವನ್ನು ನಿರ್ಮಾಣ ಮಾಡಲಾಗಿದೆ. ನನ್ನ ಮಹತ್ವಾಕಾಂಕ್ಷೆಯುಳ್ಳ ಸಿನಿಮಾ ಎಂದು ತಿಳಿಸಿದರು.
ತುಳುಚಿತ್ರರಂಗದ ಡಾ.ರಿಚರ್ಡ್ ಕ್ಯಾಸ್ಟಲಿನೋ ತುಳು, ಕನ್ನಡ, ಕೊಡವ, ಕೊಂಕಣಿ ಭಾಷೆಗಳಲ್ಲಿ ಚಲನಚಿತ್ರವನ್ನು ಮಾಡಿದವರು. ಮಂಗಳೂರಿನಂತಹ ಸ್ಥಳದಲ್ಲಿದ್ದುಕೊಂಡು ನಾಲ್ಕು ಭಾಷೆಗಳಲ್ಲಿ ಚಲನಚಿತ್ರ ತಯಾರಿಸಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿ ಪಡೆದುಕೊಳ್ಳುವುದು ಸುಲಭದ ಮಾತಲ್ಲ. ಆದ್ದರಿಂದ ಡಾ.ರಿಚರ್ಡ್ ಕ್ಯಾಸ್ಟಲಿನೋ ಅವರ ಊರಿನಲ್ಲಿಯೇ ಬೆಳ್ಳಿಹೆಜ್ಜೆ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ. ನಾಳೆ ರಿಚರ್ಡ್ ಕ್ಯಾಸ್ಟಲಿನೋ ಅವರ ಸಾಧನೆಯ ಬಗ್ಗೆ ಯಾಕೂಬ್ ಖಾದರ್ ಗುಲ್ವಾಡಿ ನಿರ್ದೇಶನ ಮಾಡಿದ ಸಾಕ್ಷ್ಯ ಚಿತ್ರವನ್ನು ಪ್ರದರ್ಶನ ಮಾಡಲಾಗುತ್ತದೆ. ಇದೇ ಸಂದರ್ಭ ರಿಚರ್ಡ್ ಕ್ಯಾಸ್ಟಲಿನೋ ದಂಪತಿಗಳನ್ನು ಸನ್ಮಾನ ಮಾಡಲಾಗುತ್ತದೆ ಎಂದು ಹೇಳಿದರು.