ಮಂಗಳೂರು: ಈ ಮಹಾತಾಯಿ ಹೊತ್ತು, ಹೆತ್ತಿದ್ದು ಬರೋಬ್ಬರಿ 9 ಮಕ್ಕಳನ್ನು. ಆದರೆ ಆಕೆಯ ಸಂಧ್ಯಾ ಕಾಲಕ್ಕೆ ಯಾವೊಬ್ಬ ಮಕ್ಕಳೂ ಸಾಕಿ ಸಲಹದೆ ತಾಯಿಯನ್ನು ಒಬ್ಬಂಟಿಯಾಗಿಸಿದ್ದಾರೆ. ಇದೀಗ ಈ ವೃದ್ಧೆ ತಮ್ಮ ಮಕ್ಕಳ ಮನೆಯಲ್ಲಿ ಉಳಿದುಕೊಳ್ಳಲು ಅವಕಾಶ ಕೊಡುವಂತೆ ಪಾಂಡೇಶ್ವರ ಪೊಲೀಸ್ ಠಾಣಾ ಹಿರಿಯ ನಾಗರಿಕರ ಸಹಯವಾಣಿಗೆ ಕರೆ ಮಾಡಿದ್ದಾರೆ.
ಹೌದು, ಸುಬ್ಬಲಕ್ಷ್ಮಿ (85) ಎಂಬ ಈ ವೃದ್ಧೆಯು ಐದು ಮಂದಿ ಪುತ್ರಿಯರು, ಐದು ಮಂದಿ ಪುತ್ರರಿಗೆ ಜನ್ಮ ನೀಡಿದ್ದರು. ಅವರಲ್ಲೋರ್ವ ಮೃತಪಟ್ಟಿದ್ದಾರೆ. ಆದರೆ ಸುಬ್ಬಲಕ್ಷ್ಮಿಯವರಿಗೆ ತಿಂಗಳಿಗೊಬ್ಬ ಗಂಡು ಮಕ್ಕಳ ಮನೆಯಲ್ಲಿ ಉಳಿಯಬೇಕೆಂಬ ಬಯಕೆಯಿದ್ದರೂ ಅದಿನ್ನೂ ಈಡೇರಿಲ್ಲವಂತೆ.
ಒಂಬತ್ತು ಮಕ್ಕಳಿದ್ದರೂ ಒಂಬ್ಬಂಟಿ ಈ "ಮಾತೆ" ತೊಕ್ಕೊಟ್ಟು ಕಾಫಿಕಾಡು ನಿವಾಸಿ ಪುತ್ರನ ಮನೆಯಲ್ಲಿದ್ದ ಸುಬ್ಬಲಕ್ಷ್ಮಿಯವರನ್ನು ಮೂರು ತಿಂಗಳ ಹಿಂದೆ ಪುತ್ರ ಹಾಗೂ ಸೊಸೆ ರಿಕ್ಷಾದಲ್ಲಿ ಸಂಬಂಧಿಕರೊಬ್ಬರ ಮನೆಗೆ ಕಳುಹಿಸಿದ್ದರು. ಅಲ್ಲಿಂದ ಬೇರೆ ಪುತ್ರರು ತನ್ನನ್ನು ಕರೆದೊಯ್ಯಬಹುದೆಂಬ ನಿರೀಕ್ಷೆಯಲ್ಲಿದ್ದ ಅಜ್ಜಿಗೆ ಅದು ಹುಸಿಯಾಗಿದೆ.
ವಿವಾಹಿತ ಪುತ್ರಿಯರ ಮನೆಯಲ್ಲಿ ಉಳಿಯಲೊಲ್ಲದ ಅವರು ಪುತ್ರರೊಂದಿಗೆ ಸಂಪರ್ಕ ಸಾಧಿಸಲು ಯತ್ನಿಸಿದರೂ ಅಸಾಧ್ಯವಾಗಿದೆ. ಇದರಿಂದ ನೊಂದು ಆಕೆ ಹಿರಿಯರ ನಾಗರಿಕ ಸಹಾಯವಾಣಿಯ ಮೊರೆ ಹೋಗಿದ್ದಾರೆ. ಅವರ ದೂರಿಗೆ ಸ್ಪಂದಿಸಿರುವ ಪೊಲೀಸ್ ಇನ್ ಸ್ಪೆಕ್ಟರ್ ರೇವತಿ ಅವರು ಸಹಾಯವಾಣಿ ಸಂಯೋಜಕರ ಮೂಲಕ ವೃದ್ಧೆಯ ಪುತ್ರರನ್ನು ಸಂಪರ್ಕಿಸಿ ಎರಡು ವಾರಗಳ ಸಮಯಾವಕಾಶ ನೀಡಿದ್ದರು. ಆದರೆ ವಾರಗಳೆರಡು ಕಳೆದರೂ ಸುಬ್ಬಲಕ್ಷ್ಮಿಯವರನ್ನು ಕರೆದೊಯ್ಯುವ ಬಗ್ಗೆ ಯಾರೊಬ್ಬರೂ ಮುಂದೆ ಬರಲೇ ಇಲ್ಲ.
ಬಳಿಕ ಆಕೆಯನ್ನು ಕಾಫಿಕಾಡಿನಲ್ಲಿರುವ ಪುತ್ರನ ಮನೆಗೆ ಪೊಲೀಸರು ಕರೆತಂದರೂ ಮನೆಗೆ ಬೀಗ ಹಾಕಲಾಗಿತ್ತು. ದೂರವಾಣಿ ಮೂಲಕ ಸಂಪರ್ಕಿಸಿದಾಗ ಕರೆ ಸ್ವೀಕರಿಸಿದ ಸೊಸೆ, ಪೊಲೀಸರು ಹಾಗೂ ಸಹಾಯವಾಣಿ ಸಿಬ್ಬಂದಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನಲಾಗ್ತಿದೆ.
ಮುಂದೆ ನಾಲ್ವರು ಪುತ್ರರನ್ನು ಠಾಣೆಗೆ ಕರೆದು ಮಾತುಕತೆ ನಡೆಸುವ ತೀರ್ಮಾನಕ್ಕೆ ಬರಲಾಗಿದೆ. ಅಲ್ಲಿಯೂ ಪ್ರಕರಣ ಇತ್ಯರ್ಥವಾಗದಿದ್ದರೆ 2006ರ ಕಾಯ್ದೆಯಡಿ ದೂರು ದಾಖಲಿಸಿ ಸಹಾಯಕ ಆಯುಕ್ತರ ನೇತೃತ್ವದ ನ್ಯಾಯಾಲಯದಲ್ಲಿ ವಿಚಾರಣೆ ನಡೆಸುವ ನಿರ್ಧಾರ ಕೈಗೊಳ್ಳಲಾಗಿದೆ.