ಮಂಗಳೂರು :ಡಿಸಿಸಿ ಹಾಗೂ ಅಪೆಕ್ಸ್ ಬ್ಯಾಂಕ್ಗಳಲ್ಲಿ 10,140 ಕೋಟಿ ರೂ.ಗಳಷ್ಟು ರೈತರು ಸಾಲ ಮಾಡಿದ್ದು, ಇದರಲ್ಲಿ 81 ಕೋಟಿ ರೂ.ಗಳ ಸಾಲವನ್ನು ಸಂಪೂರ್ಣ ಮನ್ನಾ ಮಾಡುವ ಚಿಂತನೆಯಿದೆ. ಇದಕ್ಕಾಗಿ ಸಭೆ ನಡೆಸಿ ಸಹಕಾರ ಇಲಾಖೆಯಿಂದ ಸರ್ಕಾರಕ್ಕೆ ಮಾಹಿತಿ ನೀಡಲಾಗಿದೆ ಎಂದು ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ಹೇಳಿದರು.
ನಗರದ ಕೊಡಿಯಾಲ್ ಬೈಲ್ನಲ್ಲಿರುವ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಸಭಾಂಗಣದಲ್ಲಿ ರೈತ ಸ್ಪಂದನ ಕಾರ್ಯಕ್ರಮ ಹಾಗೂ ಕೃಷಿ ಸಾಲ ವಿತರಣೆ ಮಾಡಿ ಮಾತನಾಡಿದ ಅವರು, ಮಂಗಳೂರಿನಲ್ಲಿ ರೈತರ ಸಾಲಮನ್ನಾಕ್ಕೆ ಚಾಲನೆ ದೊರಕಿದ್ದು, ಸಾಲ ಪಡೆದಿರುವ 154 ಮಂದಿ ಕೋವಿಡ್ನಿಂದ ಮೃತಪಟ್ಟಿದ್ದಾರೆ. ಅವರ ಕುಟುಂಬಕ್ಕೆ ಇದೀಗ ಒಂದು ಲಕ್ಷ ರೂ. ಮನ್ನಾ ಮಾಡಲಾಗಿದೆ ಎಂದು ಹೇಳಿದರು.
ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ರೈತರಿಗೆ ಶೂನ್ಯ ಬಡ್ಡಿದರಲ್ಲಿ ಸಾಲ ನೀಡಲು 20,810 ಕೋಟಿ ರೂ. ಮೀಸಲಿಡುವಂತೆ ಡಿಸಿಸಿ ಬ್ಯಾಂಕ್ಗಳಿಗೆ ಸಹಕಾರ ಇಲಾಖೆಯಿಂದ ಸೂಚನೆ ನೀಡಲಾಗಿದೆ. ರಾಜ್ಯದಲ್ಲಿ 21 ಸಹಕಾರ ಬ್ಯಾಂಕ್‌ಗಳು ಯಾವುದೇ ಕಪ್ಪುಚುಕ್ಕೆಗಳಿಲ್ಲದೆ ಕೆಲಸ ನಿರ್ವಹಿಸುತ್ತಿವೆ. ಆದರೆ, ಯಾವುದೋ ಒಂದು ಬ್ಯಾಂಕ್ನಲ್ಲಿ ತೊಂದರೆ ಉಂಟಾದರೆ ಇಡೀ ಸಹಕಾರ ಇಲಾಖೆಯನ್ನು ದೂಷಿಸುವ ಮಾತುಗಳು ಕೇಳಿ ಬರುತ್ತಿವೆ. ಸಹಕಾರ ಇಲಾಖೆ ಅಂದರೆ ಕೇವಲ ಸಾಲ ಕೊಡುವ, ಪಡೆಯುವ ಇಲಾಖೆಯಲ್ಲ. ಸಹಕಾರ ಇಲಾಖೆಯಲ್ಲಿಯೂ ನಾನಾ ತರಹದ ಕಾರ್ಯಕ್ರಮಗಳು ಇವೆ ಎಂದರು.
ಎಪಿಎಂಸಿಗೆ ಅನುದಾನ ನೀಡಲು ಸಿಎಂ ಒಪ್ಪಿಗೆ :ಕೊರೊನಾ ಸಂಕಷ್ಟದಿಂದ ಕಳೆದ ಒಂದು ವರ್ಷದಿಂದ ಎಪಿಎಂಸಿಗೆ ಅನುದಾನ ನೀಡಲು ಆಗಿಲ್ಲ. ಈ ವರ್ಷ ಅನುದಾನ ನೀಡಲೇಬೇಕೆಂದು ಸಿಎಂಗೆ ಹೇಳಿದ್ದೇವೆ. ಅವರೂ ಇದಕ್ಕೆ ಒಪ್ಪಿದ್ದಾರೆ. ಆದರೆ, ಅವರು ಎಷ್ಟು ಕೊಡುತ್ತಾರೆ ಅದರ ಮೇಲೆ ಸಹಕಾರ ಇಲಾಖೆ ಹಣ ಬಿಡುಗಡೆ ಮಾಡುತ್ತದೆ. ಮಂಗಳೂರು ಎಪಿಎಂಸಿಯು ಡಾ.ವೈ.ಭರತ್ ಶೆಟ್ಟಿ, ವೇದವ್ಯಾಸ ಕಾಮತ್, ಉಮಾನಾಥ ಕೋಟ್ಯಾನ್ ಅವರ ಕ್ಷೇತ್ರ ವ್ಯಾಪ್ತಿಗೆ ಬರುತ್ತದೆ. ಮೂವರೂ ಎಪಿಎಂಸಿ ಅನುದಾನಗಳನ್ನು ಕೇಳಿದ್ದು, ಆದಷ್ಟು ಶೀಘ್ರದಲ್ಲಿ ಅನುದಾನ ನೀಡಲಾಗುತ್ತದೆ ಎಂದರು.
ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಕೋವಿಡ್ನಿಂದ ಎಪಿಎಂಪಿ ಅಭಿವೃದ್ಧಿ ಕುಂಠಿತ :ಮಂಗಳೂರು ಎಪಿಎಂಸಿ 81 ಎಕರೆ ಪ್ರದೇಶದಲ್ಲಿದ್ದು, ಇದನ್ನು ಸಹಕಾರ ಇಲಾಖೆ ಹಾಗೂ ಸರಕಾರದಿಂದ ಅಭಿವೃದ್ಧಿ ಮಾಡುವ ಕನಸಿದೆ. ಆದರೆ, ಕೋವಿಡ್ ಕಾರಣದಿಂದ ಚಿಂತನೆ ಇರುವ ಮಟ್ಟಿಗೆ ಅಭಿವೃದ್ಧಿ ಕನಸು ಸಾಕಾರಗೊಳ್ಳಲಿಲ್ಲ. ಹಣಕಾಸಿಗೂ ತೊಂದರೆಯಾಯಿತು. ಎಪಿಎಂಸಿಗೆ ಬರುವ ಸೆಸ್ ಕಡಿಮೆಯಾಯಿತು. ಮುಂಚೆ 1.50 ರೂ. ಸೆಸ್ ಇರುವ ಕಾಲದಲ್ಲಿ 600 ರಿಂದ 625 ಕೋಟಿ ರೂ. ಬರುತ್ತಿತ್ತು. ಸೆಸ್ ಕಡಿಮೆಯಾದ ಬಳಿಕ 90-120 ಕೋಟಿ ರೂ. ಸೆಸ್ ಜಾಸ್ತಿ ಇದ್ದಲ್ಲಿ ಕಲೆಕ್ಷನ್ ಜಾಸ್ತಿಯಾಗಿ, ಎಪಿಎಂಸಿಯ ಅಭಿವೃದ್ಧಿಯೂ ಆಗುತ್ತಿತ್ತು ಎಂದು ಹೇಳಿದರು.
ಈ ವೇಳೆ ದ.ಕ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಡಾ.ವೈ. ಭರತ್ ಶೆಟ್ಟಿ, ವೇದವ್ಯಾಸ ಕಾಮತ್, ಉಮಾನಾಥ ಕೋಟ್ಯಾನ್, ಮೇಯರ್ ಪ್ರೇಮಾನಂದ ಶೆಟ್ಟಿ, ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ ಎನ್ ರಾಜೇಂದ್ರಕುಮಾರ್ ಮತ್ತಿತರರು ಉಪಸ್ಥಿತರಿದ್ದರು.