ಮಂಗಳೂರು:ಅನುದಾನವಿದ್ದೂ ಕಳೆದ ಆರು ತಿಂಗಳಿನಿಂದ ವೇತನ ತಡೆ ಹಿಡಿದಿರುವುದರಿಂದ ಜೀವನ ನಿರ್ವಹಣೆಗೆ ಕಷ್ಟವಾಗುತ್ತಿದೆ ಎಂದು ನಗರದ ನಾಟೆಕಲ್ನ ಪ್ರಾಥಮಿಕ ಆರೋಗ್ಯ ಕೇಂದ್ರದ ಕಿರಿಯ ಪ್ರಯೋಗಾಲಯ ತಾಂತ್ರಿಕ ಅಧಿಕಾರಿ ಜಲೀಲ್ ಇಬ್ರಾಹಿಂ ಎಂಬವರು ದ.ಕ.ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಇಂದು ಧರಣಿ ಸತ್ಯಾಗ್ರಹ ನಡೆಸಿದ್ದಾರೆ.
ಡಿಸಿ ಕಚೇರಿ ಮುಂದೆ ಪ್ರಾಥಮಿಕ ಆರೋಗ್ಯ ಕೇಂದ್ರದ ತಾಂತ್ರಿಕ ಅಧಿಕಾರಿ ಧರಣಿ ಕಳೆದ 22 ವರ್ಷಗಳಿಂದ (15 ವರ್ಷ ಖಾಯಂ, 7 ವರ್ಷ ಗುತ್ತಿಗೆ ) ಜಲೀಲ್ ಇಬ್ರಾಹಿಂರವರು ನಾಟೆಕಲ್ ಪ್ರಾಥಮಿಕ ಆರೋಗ್ಯ ಕೇಂದ್ರ ದಲ್ಲಿ ಕಿರಿಯ ಪ್ರಯೋಗಾಲಯದ ತಾಂತ್ರಿಕ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ ಕಳೆದ ಆರು ತಿಂಗಳಿನಿಂದ ಅವರಿಗೆ ಯಾವುದೇ ವೇತನ ದೊರಕಿಲ್ಲ. ಇದರಿಂದ ಜೀವನ ನಿರ್ವಹಣೆ ಬಹಳ ಕಷ್ಟವಾಗಿದೆ ಎಂದು ಅವರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ತಾನು ಯಾವುದೇ ಇಲಾಖಾ ವಿಚಾರಣೆಯಾಗಲಿ, ಗೈರುಹಾಜರಾಗಲಿ ಆಗಿರುವುದಿಲ್ಲ. ಆದರೆ ಹೊಸದಾಗಿ ನೇಮಕಗೊಂಡ ವೈದ್ಯಾಧಿಕಾರಿ ಕಳೆದ 6 ತಿಂಗಳ ವೇತನವನ್ನು ಅನುದಾನವಿದ್ದರೂ ಸಣ್ಣ ಪುಟ್ಟ ಕಾರಣಗಳನ್ನು ತಿಳಿಸಿ ವೇತನ ತಡೆಹಿಡಿದಿದ್ದಾರೆ. ಈ ಬಗ್ಗೆ ನಾನು ಜಿಲ್ಲಾಧಿಕಾರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿರ್ದೇಶಕರಿಗೆ ಸಾಕಷ್ಟು ಬಾರಿ ಮನವಿ ಮಾಡಿದ್ದೇನೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು, ವೈದ್ಯಾಧಿಕಾರಿಗಳು ವೇತನ ಮಾಡಲು ಆದೇಶ ನೀಡಿದರೂ ವೈದ್ಯಾಧಿಕಾರಿ ವೇತನ ಮಾಡದೆ ನನಗೆ ಅನಗತ್ಯ ಕಿರುಕುಳ ನೀಡುತ್ತಿದ್ದಾರೆ. ಇದರಿಂದ ನನ್ನ ಕುಟುಂಬ ನಿರ್ವಹಣೆಗೆ ತುಂಬಾ ಕಷ್ಟವಾಗಿದೆ ಎಂದರು.
ಅಲ್ಲದೆ ನನ್ನ ಮಕ್ಕಳ ವಿದ್ಯಾಭ್ಯಾಸಕ್ಕೂ ತೊಂದರೆಯುಂಟಾಗಿದೆ. ಇದರಿಂದಾಗಿ ನನ್ನ ಆರೋಗ್ಯಕ್ಕೂ ಹಾನಿಯುಂಟಾಗಿದೆ. ನನ್ನ ಆರೋಗ್ಯಕ್ಕೆ ಕುಂದುಂಟಾದರೆ ಜಿಲ್ಲಾ ಆರೋಗ್ಯ ಇಲಾಖೆ , ಜಿಲ್ಲಾಡಳಿತ ಹೊಣೆ ಹೊರಬೇಕಾಗುತ್ತದೆ ಎಂದು ಹೇಳಿದರು.
ಇದನ್ನೂ ಓದಿ:ಅಪ್ರಾಪ್ತೆ ಮೇಲೆ ಹಲ್ಲೆ, ಕಿರುಕುಳ ಯತ್ನ: ಮಾವ, ಅತ್ತೆ ವಿರುದ್ಧ ಎಸ್‌ಪಿಗೆ ದೂರು