ಪುತ್ತೂರು:ಹೃದ್ರೋಗದಿಂದ ಬಳಲುತ್ತಿರುವ ಬೀದಿ ವ್ಯಾಪಾರಿಯೊಬ್ಬರು ತಾವು ವ್ಯವಹಾರ ಮಾಡುತ್ತಿದ್ದ ಅಂಗಡಿ ಬದಿಯಲ್ಲಿದ್ದ ಸರ್ಕಾರಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬನ್ನೂರು ಗ್ರಾಮದ ನಂದಿಲ ನಿವಾಸಿಯಾಗಿದ್ದ ವಿಠಲ್ ನಾಯಕ್ (63) ಎಂಬವರು ಆತ್ಮಹತ್ಯೆ ಮಾಡಿಕೊಂಡವರು. ಪಡೀಲ್‌ನಲ್ಲಿ ತಳ್ಳುಗಾಡಿಯಲ್ಲಿ ಕಬಾಬ್ ಮಾರಾಟ ಮಾಡುತ್ತಿದ್ದ ಇವರು ಕೆಲ ದಿನಗಳ ಹಿಂದೆ ಹೃದಯಾಘಾತಕ್ಕೆ ಒಳಗಾಗಿದ್ದರು.
ಬೀದಿ ಬದಿ ವ್ಯಾಪಾರಿ ಆತ್ಮಹತ್ಯೆ ಈ ನಡುವೆ ಕೊರೊನಾ ಲಾಕ್‌ಡೌನ್ ಸಮಸ್ಯೆಯಿಂದ ವ್ಯಾಪಾರ ಸ್ಥಗಿತಗೊಂಡಿತ್ತು. ಇದರಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದು ಮಾನಸಿಕ ಒತ್ತಡಕ್ಕೂ ಒಳಗಾಗಿದ್ದರು. ಲಾಕ್‌ಡೌನ್ ಸಡಿಲಿಕೆಯಾದ ನಂತರ ವ್ಯಾಪಾರ ಶುರು ಮಾಡಿದರೂ ಸಮರ್ಪಕವಾಗಿ ವ್ಯಾಪಾರ ನಡೆಯುತ್ತಿರಲಿಲ್ಲ ಎಂದು ತಿಳಿದುಬಂದಿದೆ.
ನಂದಿಲದ ತನ್ನ ನಿವಾಸದಲ್ಲಿ ಜೂ.10ರಂದು ರಾತ್ರಿ ಊಟ ಮಾಡಿ ಹೊರಗೆ ಹೋದ ವಿಠಲ್ ನಾಯಕ್ ಬಳಿಕ ನಾಪತ್ತೆಯಾಗಿದ್ದರು. ಮನೆ ಮಂದಿ ಎಲ್ಲೆಡೆ ಹುಡುಕಾಡಿದ್ದರು. ಗುರುವಾರ ಮುಂಜಾನೆ ಪಡೀಲಿನ ಸರ್ಕಾರಿ ಬಾವಿ ಕಟ್ಟೆಯಲ್ಲಿ ಚಪ್ಪಲಿ ಮತ್ತು ಬಟ್ಟೆಯನ್ನು ಕಂಡು ಸಂಶಯಗೊಂಡ ಸ್ಥಳೀಯರು ಬಾವಿಯಲ್ಲಿ ನೋಡಿದಾಗ ಮೃತದೇಹ ಪತ್ತೆಯಾಗಿತ್ತು.
ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮೃತದೇಹವನ್ನು ಬಾವಿಯಿಂದ ಮೇಲೆತ್ತಿದರು. ಮೃತರು ಪತ್ನಿ ಮಾಲಿನಿ, ಮೂವರು ಪುತ್ರಿಯರು ಮತ್ತು ಓರ್ವ ಪುತ್ರನನ್ನು ಅಗಲಿದ್ದಾರೆ.