ಪುತ್ತೂರು (ದಕ್ಷಿಣಕನ್ನಡ): ಚಿರತೆಯೊಂದು ಕರುವಿನ ಮೇಲೆ ದಾಳಿ ನಡೆಸಿ ಕೊಂದಿರುವ ಘಟನೆ ಜಿಲ್ಲೆಯ ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದ ಕಣಿಯಾರುಮಲೆ ರಕ್ಷಿತಾರಣ್ಯದ ಅರ್ತಿಯಡ್ಕ ಎಂಬಲ್ಲಿ ನಡೆದಿದೆ. ಕರುವಿನ ಮೇಲೆ ದಾಳಿ ನಡೆಸಿದ ಬಳಿಕ ಚಿರತೆಯು ಕರುವಿನ ಕಳೇಬರವನ್ನು ಇಲ್ಲಿನ ರಬ್ಬರ್ ಮರದ ಮೇಲೆ ಬಿಟ್ಟು ಪರಾರಿಯಾಗಿದೆ.
ಇಂದು ಬೆಳಗ್ಗೆ ಇಲ್ಲಿನ ರಬ್ಬರ್ ತೋಟಕ್ಕೆ ರಬ್ಬರ್ ಟ್ಯಾಪಿಂಗ್ಗೆ ಕಾರ್ಮಿಕರು ತೆರಳಿದ್ದರು. ಈ ವೇಳೆ ತೋಟದಲ್ಲಿ ಚಿರತೆಯು ಭಾಗಶಃ ತಿಂದಿರುವ ಕರುವಿನ ಕಳೇಬರವನ್ನು ಕಂಡಿದ್ದಾರೆ. ಚಿರತೆಯು ಕರುವಿನ ಮೇಲೆ ದಾಳಿ ನಡೆಸಿದ ಬಳಿಕ ಕಳೇಬರವನ್ನು ಎಳೆದೊಯ್ದು ಮರದ ಮೇಲೆ ಇರಿಸಿತ್ತು. ಇದನ್ನು ಕಂಡು ಕಾರ್ಮಿಕರು ಬೆಚ್ಚಿಬಿದ್ದಿದ್ದಾರೆ. ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅಧಿಕಾರಿಗಳು ಚಿರತೆ ದಾಳಿ ನಡೆಸಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ. ಚಿರತೆ ದಾಳಿ ಹಿನ್ನೆಲೆ ಕಾರ್ಮಿಕರು ಇಲ್ಲಿನ ತೋಟಗಳಿಗೆ ರನ್ನರ್ ಟ್ಯಾಪಿಂಗ್ಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಪುತ್ತೂರು ಮತ್ತು ಇಲ್ಲಿನ ಆಸುಪಾಸಿನ ಪ್ರದೇಶದಲ್ಲಿ ಚಿರತೆ ಹೆಜ್ಜೆಗುರುತುಗಳು ಪತ್ತೆಯಾಗಿದ್ದವು.
ಇತ್ತೀಚಿನ ಘಟನೆ- ಮೈಸೂರಿನಲ್ಲಿ ಹಸುಗಳ ಮೇಲೆ ಚಿರತೆ ದಾಳಿ :ಜಮೀನಿನಲ್ಲಿ ಮೇಯುತ್ತಿದ್ದ ಹಸುಗಳ ಮೇಲೆ ಚಿರತೆ ದಾಳಿ ನಡೆಸಿದ್ದ ಘಟನೆ ಮೈಸೂರು ಜಿಲ್ಲೆಯ ಹೆಚ್ಡಿ ಕೋಟೆ ತಾಲೂಕಿನ ಹೊಸಹೊಳಲು ಗ್ರಾಮದಲ್ಲಿ ಕಳೆದ ಸೆಪ್ಟೆಂಬರ್ನಲ್ಲಿ ನಡೆದಿತ್ತು. ದಾಳಿಯಲ್ಲಿ ಒಂದು ಹಸು ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನೊಂದು ಹಸು ಗಂಭೀರವಾಗಿ ಗಾಯಗೊಂಡಿತ್ತು.
ಹೊಸಹೊಳಲು ಗ್ರಾಮದ ಎಚ್.ಎಸ್ ಲಿಂಗರಾಜು ಎಂಬುವವರಿಗೆ ಸೇರಿದ ಹಸು ಹುಲಿ ದಾಳಿಗೆ ಬಲಿಯಾಗಿತ್ತು. ಈ ಹಸುಗಳನ್ನು ಲಿಂಗರಾಜು ಅವರ ಪುತ್ರ ವಿಕಾಸ್ ಮೇಯಿಸುವ ವೇಳೆ ಹುಲಿ ದಾಳಿ ಮಾಡಿತ್ತು. ವಿಷಯ ತಿಳಿದು ಸ್ಥಳಕ್ಕೆ ದಮ್ಮನಕಟ್ಟೆ ವಲಯ ಅರಣ್ಯಾಧಿಕಾರಿ ಭರತ್ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಬಳಿಕ ಹುಲಿ ಸೆರೆ ಹಿಡಿಯುವಂತೆ ಗ್ರಾಮಸ್ಥರು ಒತ್ತಾಯಿಸಿದ್ದರು.
ಮಂಡ್ಯದಲ್ಲಿ ಕರುವಿನ ಮೇಲೆ ಚಿರತೆ ದಾಳಿ :ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಕರುವಿನ ಮೇಲೆ ಚಿರತೆಯೊಂದು ದಾಳಿ ಮಾಡಿ ಹೊತ್ತೊಯ್ದಿದ್ದ ಘಟನೆ ಮಂಡ್ಯ ತಾಲೂಕಿನ ಮಾದಾಪುರ ದೊಡ್ಡಿ ಗ್ರಾಮದಲ್ಲಿ ಇತ್ತೀಚೆಗೆ ನಡೆದಿತ್ತು. ಗ್ರಾಮದ ಅಭಿಷೇಕ್ ಗೌಡ ಎಂಬುವವರಿಗೆ ಸೇರಿದ ಹಸುವಿನ ಕರುವನ್ನು ತಡರಾತ್ರಿ ಕೊಟ್ಟಿಗೆಗೆ ನುಗ್ಗಿದ ಚಿರತೆ ತಿಂದುಹಾಕಿತ್ತು.
ಇದನ್ನೂ ಓದಿ :ರಸ್ತೆಯಲ್ಲಿ ಸಂಚರಿಸುತ್ತಿದ್ದವರ ಮೇಲೆ ಚಿರತೆ ದಾಳಿ: ಸಣ್ಣಪುಟ್ಟ ಗಾಯಗಳಿಂದ ಇಬ್ಬರು ಪಾರು.. ಎಂಪಿ ರೇಣುಕಾಚಾರ್ಯರ ಭೇಟಿ