ಮಂಗಳೂರು:6 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವ 2022ರ ಪ್ರಕರಣದಲ್ಲಿ ಹೋಮ್ ನರ್ಸ್‌ಗೆ ಮಂಗಳೂರಿನ ಹೆಚ್ಚುವರಿ ಸತ್ರ ನ್ಯಾಯಾಲಯ ಮತ್ತು ಎಫ್‌ಟಿ ಎಸ್‌ಸಿ-2 ನ್ಯಾಯಾಲಯ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ಶುಕ್ರವಾರ ತೀರ್ಪು ನೀಡಿದೆ. ಹಾವೇರಿ ಜಿಲ್ಲೆಯ ನೆಲೋಗಲ್ ಗ್ರಾಮ ಮೂಲದ ಬೆನಕರಾಜ್ ಲಮಾಣಿ (25) ಶಿಕ್ಷೆಗೊಳಗಾದ ಅಪರಾಧಿ.
ಸುರತ್ಕಲ್ ಪರಿಸರವಾಸಿ ಸಂತ್ರಸ್ತ ಬಾಲಕಿಯ ಅಜ್ಜ ಅಸೌಖ್ಯದಿಂದ ಇದ್ದಿದ್ದು ಆತನ್ನನು ನೋಡಿಕೊಳ್ಳಲು ಆರೋಪಿ ಹೋಮ್ ನರ್ಸ್ನ್ನು ನೇಮಿಸಲಾಗಿತ್ತು. 2022ರ ಜನವರಿಯಲ್ಲಿ ಒಂದು ದಿನ ಬಾಲಕಿಯ ತಾಯಿ ಔಷಧ ತರಲೆಂದು ಮನೆಯಿಂದ ಹೊರಗೆ ಹೋಗಿದ್ದರು. ಈ ವೇಳೆ ಆರೋಪಿಯು 6 ವರ್ಷದ ಬಾಲಕಿಯ ಮೇಲೆ ದೌರ್ಜನ್ಯ ಎಸಗಿದ್ದ. ಈ ಬಗ್ಗೆ ಮಂಗಳೂರು ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇನ್‌ಸ್ಪೆಕ್ಟರ್ ಎಸ್.ಎಚ್.ಭಜಂತ್ರಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಾಧೀಶೆ ಮಂಜುಳಾ ಇಟ್ಟಿ ಶುಕ್ರವಾರ ತೀರ್ಪು ನೀಡಿದ್ದಾರೆ. ಆರೋಪಿ ಮೇಲಿನ ಅಪರಾಧ ಸಾಬೀತಾಗಿರುವ ಹಿನ್ನೆಲೆಯಲ್ಲಿ ಐಪಿಸಿ ಸೆಕ್ಷನ್ 376 ಮತ್ತು ಪೋಕ್ಸೊ ಪ್ರಕರಣದಡಿ 20 ವರ್ಷ ಕಠಿಣ ಶಿಕ್ಷೆ ಮತ್ತು 25 ಸಾವಿರ ರೂ. ದಂಡ ವಿಧಿಸಲಾಗಿದೆ. ಐಪಿಸಿ ಸೆಕ್ಷನ್ 323ರಡಿ 6 ತಿಂಗಳ ಸಾದಾ ಸಜೆ ಹಾಗೂ 1000 ರೂ. ದಂಡ ವಿಧಿಸಿದ್ದಾರೆ. ಅಲ್ಲದೇ ನೊಂದ ಬಾಲಕಿಗೆ 2 ಲಕ್ಷ ರೂ. ಪರಿಹಾರ ನೀಡುವಂತೆ ಕಾನೂನು ಸೇವಾ ಪ್ರಾಧಿಕಾರಕ್ಕೆ ಆದೇಶಿಸಿದ್ದಾರೆ. ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ವೆಂಕಟರಮಣ ಸ್ವಾಮಿ ಸಿ. ವಾದ ಮಂಡನೆ ಮಾಡಿದ್ದರು .
ಇನ್ನು ಶಿವಮೊಗ್ಗದಲ್ಲೂ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ನಿನ್ನೆ 4 ಮಂದಿ ಅಪರಾಧಿಗಳಿಗೆ ಶಿವಮೊಗ್ಗ ಜಿಲ್ಲಾ ಎರಡನೇ ಪೋಕ್ಸೊ ನ್ಯಾಯಾಲಯ 20 ವರ್ಷ ಕಠಿಣ ಶಿಕ್ಷೆ ಹಾಗೂ ತಲಾ 1 ಲಕ್ಷ ರೂ ದಂಡ ವಿಧಿಸಿ ಆದೇಶಿಸಿತ್ತು. 2020ರ ಡಿಸೆಂಬರ್ನಲ್ಲಿ ಸಂತ್ರಸ್ತ ಬಾಲಕಿಯು ಆಸ್ಪತ್ರೆಯಲ್ಲಿ ತನ್ನ ತಾಯಿಯನ್ನು ನೋಡಿಕೊಳ್ಳಲು ಬಂದಿದ್ದು, ಊಟ ತರಲೆಂದು ಹೊರ ಬಂದಿದ್ದಳು. ಈ ವೇಳೆ ನಾಲ್ವರು ಓಮಿನಿಯಲ್ಲಿ ಬಂದು ಆಕೆಯನ್ನು ಅಪಹರಿಸಿ ನಗರದ ಹೊರವಲಯಕ್ಕೆ ಹೋಗಿ ಅತ್ಯಾಚಾರ ನಡೆಸಿದ್ದರು.
ಇದನ್ನೂ ಓದಿ:ಬಾಲಕಿ ಮೇಲೆ ಅತ್ಯಾಚಾರ ಆರೋಪ: ಇನ್ಸ್‌ಪೆಕ್ಟರ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ